

* ಮುಂದುವರಿದ ವರ್ಷಧಾರೆ * ತಂಬಾಕು ಗಿಡಗಳಿಗೆ ಹಾನಿ
ಅರಕಲಗೂಡು: ತಾಲೂಕಿನಲ್ಲಿ ಮಳೆ ಬುಧವಾರವೂ ಮುಂದುವರಿದಿದೆ. ಮಳೆಯಿಂದಾಗಿ ಕೆರೆ, ಕಟ್ಟೆಗಳ ತುಂಬಿವೆ.
ಹೇಮಾವತಿ ಹಾಗೂ ಕಾವೇರಿ ನದಿ ನೀರಿನ ಮಟ್ಟದಲ್ಲೂ ಬುಧವಾರ ಏರಿಕೆಯಾಗಿದೆ. ಕೆಲವು ಕಡೆ ನದಿ ಪಾತ್ರಸ ತಗ್ಗು ಪ್ರದೇಶದಲ್ಲಿ ಕೃಷಿ ಜಮೀನು ಮುಳುಗಡೆಯಾಗಿದೆ. ಕೆರೆ, ಕಟ್ಟೆ ಒಡಲು ತುಂಬಿ ಹರಿಯುತ್ತಿದೆ.
ಸತತ ಮಳೆಯಿಂದಾಗಿ ಸಾಕಷ್ಟು ಕಡೆ ಹೊಗೆಸೊಪ್ಪು ಬೆಳೆ ಜಮೀನು ಜಲಾವೃತವಾಗಿದೆ. ಕಳೆದ ತಿಂಗಳು ವಾರಗಟ್ಟಲೆ ಸತತವಾಗಿ ಸುರಿದ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿತ್ತು. ಇದೀಗ ಈ ವಾರವೂ ಎಡಬಿಡದೇ ಬೀಳುತ್ತಿರುವ ಮಳೆಗೆ ಅತಿಯಾದ ತೇವಾಂಶದಿಂದ ತಂಬಾಕು ಬೆಳೆ ಕುಂಠಿತಗೊಂಡಿದೆ. ನೀರು ನಿಂತಿರುವ ಕಡೆ ಬಸಿ ಕಾಲುವೆ ತೋಡಿ ಹೊರಗೆ ಕಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಫಸಲು ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಮಲ್ಲಿಪಟ್ಟಣ, ಕಸಬಾ, ದೊಡ್ಡಮಗ್ಗೆ ಹೋಬಳಿ ಭಾಗದಲ್ಲಿ ಭಾರಿ ಮಳೆಯಾಗಿದೆ. ತಗ್ಗು ಪ್ರದೇಶದ ಬೆಳೆಗಳು ನಾಶವಾಗಿದೆ. ಇನ್ನುಳಿದಂತೆ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದ ಆಲೂ, ಮುಸುಕಿನ ಜೋಳ ಮತ್ತಿತರ ಬೆಳೆಗಳಿಗೆ ಮಳೆ ಸಾಕು ಎನಿಸಿದೆ. ಇನ್ನು ಮುಂದಿನ ವಾರವಾದರೂ ಮಳೆರಾಯ ಬಿಡುವು ನೀಡಬೇಕು ಎನ್ನುತ್ತಾರೆ ಅನ್ನದಾತರು.
ತಾಲೂಕಿನಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಮಲ್ಲಿಪಟ್ಟಣದಲ್ಲಿ 57.1 ಮಿಮೀ, ಕಸಬಾ 26.2 ಮಿಮೀ, ದೊಡ್ಡಮಗ್ಗೆ 20.8 ಮಿಮೀ, ಕೊಣನೂರು 10.5 ಮಿಮೀ, ದೊಡ್ಡಬೆಮ್ಮತ್ತಿ 14.2 ಮಿಮೀ, ಬಸವಾಪಟ್ಟಣ 13.6ಮಿಮೀ, ರಾಮನಾಥಪುರದಲ್ಲಿ 15.6 ಮಿಮೀ ಮಳೆಯಾಗಿದೆ.