ಚಾಮರಾಜನಗರ : ಕೊಳ್ಪಳೇಗಾಲ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ 5.50 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು.
2023-24ನೇ ಸಾಲಿನ ಅಲ್ಪ ಸಂಖ್ಯಾಂತರ ಕಾಲನಿಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ತಾಲೂಕಿನ ಜಕ್ಕಳಿ ಗ್ರಾಮದ 4 ಕಡೆಗಳಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ, ಪಟ್ಟಣದ ಆಶ್ರಯ ಬಡಾವಣೆಯ 5 ಕಡೆಗಳಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ, ನೂರ್ ಮೊಹಲ್ಲಾ ಬಡಾವಣೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿ, 50 ಲಕ್ಷ ರೂ. ವೆಚ್ಚದಲ್ಲಿ ವಿದ್ಯಾನಗರ ಬಡಾವಣೆಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಮತ್ತು 1.5 ಕೋಟಿ ರೂ. ವೆಚ್ಚದಲ್ಲಿ ಬಸ್ತೀಪುರ ಬಡಾವಣೆ ಹಿಂಭಾಗವಿರುವ ಘನತ್ಯಾಜ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಈ ಬಗ್ಗೆ ಸುದ್ದಿಗಾರ ಉದ್ದೇಶಿಸಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಶಾಸಕನಾದ ಬಳಿಕ ಕೊಳ್ಳೇಗಾಲ ಪಟ್ಟಣದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಮೊದಲ ಕಾರ್ಯಕ್ರಮ ಇದಾಗಿದೆ. ಇನ್ಮುಂದೆ ಅಭಿವೃದ್ಧಿ ಪರ್ವ ಪ್ರಾರಂಭವಾಗುತ್ತದೆ. ಕೊಳ್ಳೇಗಾಲ ಜನತೆ ನನಗೆ ಅಭೂತ ಪೂರ್ವ ಗೆಲವು ನೀಡಿದ್ದಾರೆ. ಅದಕ್ಕಾಗಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡುತ್ತೇನೆ ಎಂದರು.
ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಜಯಣ್ಣ, ನಗರಸಭೆ ಸದಸ್ಯರಾದ ಜಯಮೇರಿ, ಬಸ್ತೀಪುರ ಶಾಂತರಾಜು, ಮಂಜುನಾಥ್, ರಾಘವೇಂದ್ರ, ರೇಖಾ, ಸುಶೀಲಾ, ಭಾಗ್ಯಮ್ಮ, ಪುಷ್ಪಲತಾ ಶಾಂತರಾಜು, ಸುಮಾ ಸುಬ್ಬಣ್ಣ, ಕವಿತಾ, ಮನೋಹರ್, ಧರಣೇಶ್, ಎ.ಪಿ.ಶಂಕರ್, ನಾಗೇಂದ್ರ, ಜಿ.ಪಿ.ಶಿವಕುಮಾರ್, ಮಾಜಿ ಸದಸ್ಯ ಅಕ್ಮಲ್ ಪಾಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೈರಾಜ್ ಮತ್ತಿತರಿದ್ದರು.