ಟೈಯರ್ ಸಿಡಿದು ಎಆರ್‌ಕೆ ಕಾರು ಅಪಘಾತ

25-KGLPHOTO-4,,,,
ಮೈಸೂರಿನ ಹೊರವಲಯದಲ್ಲಿರುವ ನಾಡನಹಳ್ಳಿ ಬಳಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತಿದ್ದ ಕಾರು ಅಪಘಾತಕ್ಕೀಡಾಗಿರುವುದು.
Published on

ಕೊಳ್ಳೇಗಾಲ : ಮೈಸೂರು ಹೊರವಲಯದ ನಾಡನಹಳ್ಳಿ ಬಳಿ ಬುಧವಾರ ರಾತ್ರಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರಿನ ಟೈಯರ್ ಸಿಡಿದು ಅಪಘಾತ ಸಂಭವಿಸಿದ್ದು. ಅದೃಷ್ಟವಶಾತ್ ಯಾವುದೇ ತೊಂದರೆ ಆಗಿಲ್ಲ.

ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆಯ ಮತ ಪ್ರಚಾರ ಮುಗಿಸಿದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ತಮ್ಮ ಆಪ್ತ ಸಹಾಯಕ ಚೇತನ್ ಹಾಗೂ ಚಾಲಕ ಸತೀಶ್ ಅವರೊಂದಿಗೆ ಮೈಸೂರಿನ ನಿವಾಸಕ್ಕೆ ತೆರಳುತ್ತಿದ್ದರು. ಮೈಸೂರು ಸಮೀಪವಿರುವ ನಾಡನಹಳ್ಳಿ ಬಳಿ ರಾತ್ರಿ 11.30 ರ ಸಮಯದಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿ ಟೈಯರ್ ಸಿಡಿದಿದ್ದು ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಹಳ್ಳದ ಕಡೆಗೆ ನುಗ್ಗಿ ಅಲ್ಲಿಂದ ಕಲ್ಲಿನ ಬಂಡೆಗೆ ಗುದ್ದಿದೆ. ಇದರಿಂದ ಕಾರಿನ ಮುಂಭಾಗ ಜಖಂಗೊಂಡಿದೆ.

ಈ ಅವಘಡ ನಡೆದ ಸಮಯದಲ್ಲಿ ತಡರಾತ್ರಿಯಾದ್ದರಿಂದ ವಾಹನಗಳ ಸಂಚಾರ ಇರಲಿಲ್ಲವಾದ್ದರಿಂದ ಅಪಘಾತ ತೀವ್ರತೆ ತಗ್ಗಿದೆ. ಅದಲ್ಲದೆ, ಶಾಸಕ ಎ.ಆರ್.ಕೃಷ್ಣಮೂರ್ತಿ ಕುಳಿತಿದ್ದ ಕಾರಿನ ಎಡಭಾಗ ಮುಂಭಾಗವೇ ಹೆಚ್ಚು ಜಖಂಗೊಡ್ಡಿದ್ದು. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆ ಆಗಿಲ್ಲ. ಅಪಘಾತ ಸಂಭವಿಸಿದ ಬಳಿಕ ಶಾಸಕರು ಚಲಿಸುತ್ತಿದ್ದ ಕಾರಿನ ಹಿಂಭಾಗ ಕಾರಿನಲ್ಲಿ ಬರುತ್ತಿದ್ದ ಬೆಂಬಲಿಗರು ಅಪಘಾತ ಆಗಿರುವುದನ್ನು ಕಂಡಿದ್ದು. ಶಾಸಕರನ್ನು ಜೋಪಾನವಾಗಿ ಕಾರಿನಿಂದ ಹೊರಗೆ ಇಳಿಸಿದ್ದಾರೆ. ನಂತರ ಬೆಂಬಲಿಗರ ಕಾರಿನಲ್ಲಿ ಮೈಸೂರಿನ ಮನೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ, ಆಪ್ತ ಸಹಾಯಕ ಚೇತನ್, ಸತೀಶ್ ತೆರಳಿದ್ದಾರೆ.

ಬೆಂಬಲಿಗರಲ್ಲಿ ಆಂತಕ: ಶಾಸಕರು ಪ್ರಯಾಣಿಸುತ್ತಿದ್ದ ಕಾರು ರಾತ್ರಿ ಅಪಘಾತಕ್ಕೀಡಾಗಿದೆ ಎಂದು ಮಾಹಿತಿ ತಿಳಿಯುತ್ತಿದಂತೆ ಶಾಸಕರ ಹಿತೈಷಿಗಳು, ಬೆಂಬಲಿಗರು, ಕಾರ್ಯಕರ್ತರು ಗಾಬರಿಗೊಂಡು ಶಾಸಕರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಹಿನ್ನೆಲೆ, ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಸಾಮಾಜಿಕ ಜಾಲತಾಣ ಮೂಲಕ ಬೆಂಬಲಿಗರಿಗೆ ಬುಧವಾರ ರಾತ್ರಿ ನನ್ನ ವಾಹನ ಆಯತಪ್ಪಿ ಸಣ್ಣಪುಟ್ಟ ಗಾಯವಾಗಿದೆ. ನಾನು ಕ್ಷೇಮವಾಗಿದ್ದೇನೆ. ಕ್ಷೇತ್ರದ ಜನರ ಆಶೀರ್ವಾದದಿಂದ ಯಾವುದೇ ತೊಂದರೆ ಆಗಿಲ್ಲ. ಯಾರು ಆತಂಕ ಪಡಬೇಡಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net