ಚಾಮರಾಜನಗರ : ಯಳಂದೂರು ತಾಲೂಕಿನಲ್ಲಿ ಕ್ರೀಡಾಂಗಣ ಇಲ್ಲದೆ ಕ್ರೀಡೆ ಆಯೋಜಿಸಲು ಪಕ್ಕದ ತಾಲೂಕಿಗೆ ತೆರಳುವ ಸ್ಥಿತಿ ಇದೆ. ಕ್ರೀಡಾಂಗಣ ನಿರ್ಮಿಸುವ ನಿಟ್ಟಿನಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರು ಮುಂದಾಗಬೇಕು ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ ಮಾಡಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾತನಾಡಿದ ಅವರು, ಯಳಂದೂರು ತಾಲೂಕು ಕೇಂದ್ರವಾಗಿದ್ದರೂ ಇಲ್ಲಿ ಸೂಕ್ತ ಕ್ರೀಡಾಂಗಣವಿಲ್ಲ. ಕ್ರೀಡೆಗಳನ್ನು ಆಯೋಜಿಸಲು ಪಕ್ಕದ ತಾಲೂಕುಗಳಿಗೆ ತೆರಳುವ ಸ್ಥಿತಿ ಇದೆ. ಇದರಿಂದ ಇಲ್ಲಿಯ ವಿದ್ಯಾರ್ಥಿಗಳು, ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು.
ಸಚಿವ ಪ್ರಿಯಾಂಕ್ ಖರ್ಗೆ ಇದಕ್ಕೆ ಉತ್ತರಿಸಿ, ಈಗಾಗಲೇ ಕ್ರೀಡಾಂಗಣ ನಿರ್ಮಾಣಕ್ಕೆ ಸೂಕ್ತ ಜಾಗ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಆದರೆ ಇಲ್ಲಿ ಜಾಗ ಗುರುತಿಸಿಕೊಟ್ಟಿಲ್ಲ. ಜಾಗ ಗುರುತಿಸಿಕೊಟ್ಟರೆ ಅದಕ್ಕೆ ಬೇಕಾದ ಅನುದಾನ ನೀಡಲು ಕ್ರಮ ವಹಿಸಲಾಗುವುದು ಎಂದು ಉತ್ತರಿಸಿದರು.
ಇದಕ್ಕೆ ಶಾಸಕ ಕೃಷ್ಣಮೂರ್ತಿ ಉತ್ತರಿಸಿ, ಈಗಾಗಲೇ ಇಲಾಖೆಯ ಅಧಿಕಾರಿಗಳಿಂದ ಜಾಗ ಗುರುತಿಸಿ ಸರ್ವೇ ಮಾಡಿಸಲಾಗಿದೆ. ಸೂಕ್ತ ಜಾಗ ಕೊಡಿಸಲು ನಾನು ಶ್ರಮಿಸುತ್ತೇನೆ. ಜತೆಗೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣದ ಕಾಮಗಾರಿಗಳನ್ನು ಪೂರ್ಣಗೊಳಿಸಲು 3 ಕೋಟಿ ರೂ. ಅನುದಾನ ಅಗತ್ಯವಿದ್ದು, ಇದನ್ನು ಬಿಡುಗಡೆ ಮಾಡಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದರು.