

ಮಡಿಕೇರಿ: ಯುವ ಮನಸ್ಸುಗಳನ್ನು ಸಂಭ್ರಮದ ಅಲೆಯಲ್ಲಿ ತೇಲಿಸುವ ಖ್ಯಾತ ಹಿನ್ನೆಲೆ ಗಾಯಕ ಅರ್ಜುನ್ ಜನ್ಯ, ರಾಜೇಶ್‌ಕೃಷ್ಣನ್, ಶಮಿತಾ ಮಲ್ನಾಡ್‌ರವರ ಗಾನ ಎಲ್ಲರ ಮನ ಸೆಳೆಯಿತು.
ಮಡಿಕೇರಿ ದಸರಾ ಹಿನ್ನೆಲೆ ಆಯುಧ ಪೂಜಾ ದಿನವಾದ ಶುಕ್ರವಾರ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮದ ವರ್ಣ ರಂಜಿತ ವೇದಿಕೆಯಲ್ಲಿ ನಡೆದ ಗಾನವೈಭವದಲ್ಲಿ ಅರ್ಜುನ್ ಜನ್ಯ, ರಾಜೇಶ್‌ಕೃಷ್ಣನ್, ಶಮಿತಾ ಮಲ್ನಾಡ್ ರವರು ಹಾಡಿದ ಗಾನಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು.
ಪ್ರಸಕ್ತ ಸಾಲಿನ ದಸರಾ ಮಹೋತ್ಸವದ ಹಾಡುಗಾರರಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಅರ್ಜುನ್, ರಾಜೇಶ್‌ಕೃಷ್ಣನ್, ಸಮಿತ ಮಲ್ನಾಡ್‌ರವರ ಗಾನವೈಭವ ಎಲ್ಲರನ್ನು ಆಕರ್ಷಿಸಿತು. ಇವರೊಂದಿಗೆ ಹಿನ್ನೆಲೆ ಗಾಯಕರಾದ ವಿನೋದ್, ನಾಧಿರ ಬಾನು, ಮೂರ್ತಿ ಸ್ವರ ಸೇರಿಸಿದರು.
ಮದುರ ಪಿಸು ಮಾತಿಗೆ ಹಾಡಿನ ಮೂಲಕ ಎಂಟ್ರಿಕೊಟ್ಟ ಶಮಿತಾ ಮಲ್ನಾಡ್, ಬಾಳಬಂಗಾರ ನೀನು.. ಹಣೇಯ ಸಿಂಗಾರ ನೀನು.. ಎಂದು ರಾಜ್‌ಕುಮಾರ್‌ರವರ ಚಿತ್ರದ ಹಾಡನ್ನು ಹಾಡಿ ರಂಜಿಸಿದರು. ಜೋಕೆ ನಾನು ಬಳ್ಳಿಯ ಮಿಂಚು, ಸುತ್ತಮುತ್ತಲು ಸಂಜೆಗತ್ತಲು, ದಮ್ ಮಾರೆ ದಮ್ ಸೇರಿದಂತೆ ಇತರೆ ಹಾಡುಗಳನ್ನು ಹಾಡಿ ರಂಜಿಸಿದರು.
ಯಾರೋ.. ಕಣ್ಣಲ್ಲಿ ಕಣ್ಣಾನಿಟ್ಟು ಮನಸ್ಸಿನಲ್ಲಿ ಮನಸಾ ಇಟ್ಟು ಹಾಡಿನ ಮೂಲಕ ರಾಜೇಶ್ ಕೃಷ್ಣನ್ ಎಂಟ್ರಿಕೊಟ್ಟರು. ಹಾಡಿನ ದೇವರಾದ ಎಸ್‌ಪಿ ಬಾಲಸುಬ್ರಮಣ್ಯವರಿಗಾಗಿ ಹುಚ್ಚ ಚಿತ್ರದ ಉಸಿರೇ ಉಸಿರೇ ಹಾಡನ್ನು ಹಾಡಿದರು. ಈ ಸಂದರ್ಭ ಜಿಲ್ಲೆಯ ಜನತೆ ಬೊಬೈಲ್ ಬೆಳಕನ್ನು ಆನ್ ಮಾಡುವುದರ ಮೂಲಕ ಧನ್ಯವಾದ ಅರ್ಪಿಸಿದರು. ಶಂಕರ್‌ನಾಂಗ್ ನಟನೆಯ ಗೀತಾಂಜಲಿ ಹಾಡಿಗೆ ಜನತೆ ತಲೆದೂಗಿದರು. ನಂತರ ರಾಜೇಶ್ ಕೃಷ್ಣನ್‌ರವರೊಂದಿಗೆ ವಿನೋದ್ ಮತ್ತು ಮೂರ್ತಿ ಜಂಟಿಯಾಗಿ ಕಾಣದಂತೆ ಮಾಯವಾದನು ಹಾಡಿ ರಂಜಿಸಿದರು.
ಜೈ.. ಜೈ.. ಭಜರಂಗಿ ಹಾಡಿನ ಮೂಲಕ ಎಂಟ್ರಿಕೊಟ್ಟ ಸಂಗೀತ ಸಂಯೋಜಕ ಮತ್ತು ಹಿನ್ನೆಲೆ ಗಾಯಕ ಅರ್ಜುನ್ ಜನ್ಯರನ್ನು ಕಂಡ ಜನತೆ ಶಿಳ್ಳೆ, ಚಪ್ಪಾಳೆ ಮೂಲಕ ಸ್ವಾಗತಿಸಿದರು. ನಂತರ ಶಮಿತಾ ಮಲ್ನಾಡ್ ಅವರೊಂದಿಗೆ ಜಂಟಿಯಾಗಿ ಒಂದು ಮಳೆಬಿಲ್ಲು ಸಾಂಗ್ ಹಾಡಿದರು. ಈ ಸಂದರ್ಭ ಜಿಲ್ಲೆಯ ಜನತೆ ಧ್ವನಿ ಗೂಡಿಸಿದರು. ಜರಸಂದ ಚಿತ್ರ ನೀರಿಗೆ ಬಾರಿಗೆ ಚೆನ್ನಿ, ರ‌್ಯಾಂಬೋ ೨ ಚಿತ್ರ ಚುಟುಚುಟು ಅಂತೈತಿ ಹಾಡಿಗೆ ಯುವಕಯುವತಿಯರು ಕುಣಿದು ಕುಪ್ಪಳಿಸಿದರು.
ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಜುಗಲ್‌ಬಂದಿಯಲ್ಲಿ ಎಣ್ಣೆಬೇಕು ಅಣ್ಣ.. ಹಾಡುಹೇಳಿ ರಂಜಿಸಿದರು. ರಾಜೇಶ್ ಕೃಷ್ಣನ್ ಮತ್ತು ಶಮಿತಾ ಮಲ್ನಾಡ್ ಜುಗಲ್‌ಬಂದಿಯಲ್ಲಿ ಸುಂಟರಗಾಳಿ, ಮಸ್ತು ಮಸ್ತು ಹುಡುಗಿ ಬಂದ್ಲು, ಯಾರೆ ನೀನು ರೋಜಾ ಹೂವೆ, ಹಾಡು ಸಂತೋಷಕ್ಕೆ.. ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು, ಹಾಡು ಹೇಳಿದರೆ, ರಾಜೇಶ್ ಕೃಷ್ಣನ್, ವಿನೋದ್, ಮೂರ್ತಿರವರು ಕೂರಕ್ಕೂ ಕಳ್ಳಿಕೆರೆ ಹಾಡುಹೇಳಿ ರಂಜಿಸಿದರು. ಎಲ್ಲಾ ಹಿನ್ನೆಲೆ ಗಾಯಕರು ಒಟ್ಟುಗೂಡಿ ಕುಲದಲ್ಲಿ ಕೀಳ್ಯಾವುದು ಹುಚ್ಚಪ್ಪ ಹಾಡನ್ನು ಹೇಳುವ ಮೂಲಕ ಸಂಪನ್ನಗೊಂಡಿತ್ತು.
ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಮಂಜು, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ದಸರಾ ಸಮಿತಿ ಕಾರ್ಯಧ್ಯಕ್ಷರಾದ ಪ್ರಕಾಶ್ ಆಚಾರ್ಯ, ದಶಮಂಟಪ ಸಮಿತಿ ಅಧ್ಯಕ್ಷರಾದ ಜಗದೀಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಇತರರು ಇದ್ದರು.
ಉಸ್ತುವಾರಿ ಮತ್ತು ಶಾಸಕರಿಂದ ಸ್ಟೆಪ್
ಮೈಸೂರು-ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜ್ ಮತ್ತು ಮಡಿಕೇರಿ ಕ್ಷೇತ್ರ ಶಾಸಕ ಮಂತರ್‌ಗೌಡರವರು ರಾಜೇಶ್ ಕೃಷ್ಣ ಅವರು ಹಾಡಿ ಡಿಗ್ಗಜರು ಚಿತ್ರದ ಕುಚಿಕು ಕುಚಿಕು ಹಾಡಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು. ರಾಜೇಶ್ ಕೃಷ್ಣರಿಗೆ ಹಿನ್ನೆಲೆಗಾಯಕ ವಿನೋದ್ ಸಾಥ್ ನೀಡಿದರು. ಅಧ್ಯಕ್ಷ.. ಅಧ್ಯಕ್ಷ.. ಹಾಡಿಗೆ ಮಂತರ್‌ಗೌಡ ಹಾಗೂ ಪತ್ನಿ ದಿವ್ಯ ಮಂತರ್‌ಗೌಡ ಮತ್ತು ಪುತ್ರ ಹೆಚ್ಚೆಹಾಕಿದರು.