'ಆಜಾದಿ ಕಾ ಅಮೃತ್ ಮಹೋತ್ಸವ್' ನಿಮಿತ್ತ ಆಂಧ್ರಪ್ರದೇಶದಲ್ಲಿ ಅರಿವು ಆಚರಣೆ ಕಾರ್ಯಕ್ರಮ

azadi
Published on

ಆಂಧ್ರಪ್ರದೇಶ: ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿರುವ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ 75ನೇ ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮವನ್ನು ಆಂಧ್ರಪ್ರದೇಶ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ರುದ್ರಾಭಿಷೇಕ ನಡೆಸುವ ಮೂಲಕ ಆಚರಿಸಲಾಯಿತು.

75 ತಾಣಗಳಲ್ಲಿ 75 ರಾಷ್ಟ್ರೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ 'ಅರಿವು ಆಚರಣೆ' ಎಂಬ ಕಾರ್ಯಕ್ರಮವನ್ನು ಇಲ್ಲಿ ನಡೆಸಲಾಯಿತು. ಲೋಕಕಲ್ಯಾಣಾರ್ಥವಾಗಿ ರುದ್ರಾಭಿಷೇಕ ಮಾಡುವ ಮೂಲಕ ಸರಪಂಚರಾದ ಕೊಟ್ಟಪಲ್ಲಿ ಅರುಣ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳುವಂತೆ ಹಲವಾರು ರೀತಿಯ ಬೇಡಿಕೆ ಬಂದಿದ್ದನ್ನು ಗಮನಿಸಿ ಸರಪಂಚರು ಸಮಗ್ರ ಅಭಿವೃದ್ಧಿ ಕೈಗೊಳ್ಳುತ್ತಿರುವುದಾಗಿ ಕೊಟ್ಟಪಲ್ಲಿ ಅರುಣ ಹೇಳಿದರು.

ದೇಶದ ಯಾವುದೇ ಮೂಲೆಗೆ ಹೋದರೂ ಸ್ವತಂತ್ರ ಹೋರಾಟಗಾರರು ಸಿಗುತ್ತಾರೆ. ಅಂತಹ ಒಂದು ಸ್ಥಳವಾದ ದ್ರಾಕ್ಷಾರಾಮನಲ್ಲಿ ಕರ್ನಾಟಕದವರು ಬಂದು ಸ್ವತಂತ್ರ ಹೋರಾಟಗಾರರಿಗೆ ಗೌರವ ಸಲ್ಲಿಸಿ ಅಮೃತ ರತ್ನ ಪ್ರಶಸ್ತಿ ಪುರಸ್ಕಾರ ಮಾಡಿದ್ದಕ್ಕೆ ಅತೀವ ಸಂತಸವಾಗಿದೆ ಎಂದು ಸ್ವತಂತ್ರ ಹೋರಾಟಗಾರ ಲಿಂಗೈಕ್ಯ ಮುದ್ರೆಗೌಡ್ ವೆಂಕಟಸ್ವಾಮಿ ನಾಯ್ಡು ಅವರ ಮಗ ವೀರಭದ್ರ ರಾವ್ ನುಡಿದರು.

ಡಾ. ಎಚ್. ಕೆ ವಿನಯ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ಪ್ರಧಾನ ಅರ್ಚಕರು ಕಲ್ಲಿಪಲ್ಲಿ ಪನ್ನೀಕ ಕುಮಾರ್, ಧರ್ಮಾಧಿಕಾರಿ ಶಂಬಾ ಶಿವರಾಮ ಅಬ್ಬಯನವರು, ಗುಚಿರಾಜ್ ಗದಗಯ್ಯ ಶಾಸ್ತ್ರಿ, ಎಂ ಕೊಟ್ರೇಶಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿವಯೋಗಿ ಕಂಬಾಳಿ ಮಠ ಕಾರ್ಯಕ್ರಮ ನಿರೂಪಿಸಿದರು. ಟಿ.ಎಚ್​. ಎಂ ಮೇನಕ ಮತ್ತು ಸಂಗಡಿಗರು ಮಂಗಲ ಗೀತೆಯ ವಂದನಾರ್ಪಣೆಯನ್ನು ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net