ಕಾರಂತರ ಕೃತಿಗಳಲ್ಲಿದೆ ವೈಜ್ಞಾನಿಕ ಪ್ರಜ್ಞೆಯ ಅರಿವು

Kaarantha
Published on

ಡಾ.ಗಣನಾಥ ಶೆಟ್ಟಿ ಎಕ್ಕಾರು ಅನಿಸಿಕೆ

ಅರಿವಿನ ಬೆಳಕು ಉಪನ್ಯಾಸ ಮಾಲಿಕೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಡಾ. ಶಿವರಾಮ ಕಾರಂತರು 6 ದಶಕಗಳ ಹಿಂದಿಯೇ ಸಂವಿಧಾನದ ಅಂಶಗಳನ್ನು ತಮ್ಮ ಜೀವನದಲ್ಲಿ ಪ್ರತಿಪಾದಿಸಿದ್ದಾರೆ. ಅವರ ಕೃತಿಗಳು ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆಯ ಅರಿವು ಮೂಡಿಸುತ್ತದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಜ್ಞಾನ ಹೆಚ್ಚಿಸುವಂತಹ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಕಿವಿಮಾತು ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್​ ಉಡುಪಿ ಜಿಲ್ಲೆ ವತಿಯಿಂದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಡುಪಿಯ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಅರಿವಿನ ಬೆಳಕು ಉಪನ್ಯಾಸ ಮಾಲೆ-10 ಕಾರ್ಯಕ್ರಮದಲ್ಲಿ ಮಾತನಾಡಿದರು.

ಆದರ್ಶಮಯ ಜೀವನ

ಸಾಹಿತಿ ಮತ್ತು ಮಹಿಳಾ ಚಿಂತಕಿ ವಸಂತಿ ಶೆಟ್ಟಿ ಬ್ರಹ್ಮಾವರ ಅವರು ಕಾರಂತರ ಬದುಕು-ಬರಹಗಳು ವಿದ್ಯಾರ್ಥಿಗಳಿಗೆ ಪ್ರೇರಣಾ ಶಕ್ತಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಕಾರಂತರ ನೇರ ನಡೆ-ನುಡಿ ಹಾಗೂ ಬದುಕಿದ ರೀತಿ ಆದರ್ಶಮಯ. ಎಲ್ಲ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸಿದ್ದು, ಅಪಾರ ಅನುಭವಿಗಳಾಗಿದ್ದರು. ಯುವ ಪೀಳಿಗೆ ಅವರ ಮಾರ್ಗ ಪಾಲಿಸುವಂತಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಜಗದೀಶಕುಮಾರ್​ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಡಾ.ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯ ಸತೀಶ ಕೊಡವೂರು, ಕನ್ನಡ ಸಾಹಿತ್ಯ ಪರಿಷತ್​ನ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್​.ಪಿ. ಉಪಸ್ಥಿತರಿದ್ದರು.

ಡಾ. ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾಲೇಜಿನ ಎನ್​ಎಸ್​ಎಸ್​ನ ಯೋಜನಾಧಿಕಾರಿ ಭವ್ಯಾ ನಾಗರಾಜ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net