ರೈತನ ಕೈ ಹಿಡಿದ ಆರಿದ್ರ ಮಳೆ

Aridra rain came
Published on

ಲಕ್ಷ್ಮೇಶ್ವರ: ರೋಹಿಣಿ, ಮೃಗಶಿರ ಮಳೆಯಾಗದೇ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ಭಾನುವಾರ ಸುರಿದ ಆರಿದ್ರ ಹದ ಮಳೆ ರೈತ ಸಮುದಾಯದಲ್ಲಿ ಹರ್ಷ ಮೂಡಿಸಿದೆ.

ಬೆಳಗ್ಗೆಯಿಂದಲೇ ಮೋಡಮುಸುಕಿದ ವಾತಾವರಣವಿದ್ದು ಮಧ್ಯಾಹ್ನದಿಂದ ಪ್ರಾರಂಭವಾದ ಮಳೆ ಸಂಜೆವರೆಗೂ ಸುರಿಯಿತು. ಪಟ್ಟಣ ಸೇರಿದಂತೆ ತಾಲೂಕಿನ ಯಳವತ್ತಿ, ಯತ್ನಳ್ಳಿ, ಮಾಗಡಿ, ಗೊಜನೂರ, ಅಕ್ಕಿಗುಂದ, ಆದ್ರಳ್ಳಿ, ಬಡ್ನಿ, ಬಟ್ಟೂರ, ಸೂರಣಗಿ, ಹುಲ್ಲೂರ, ಬಾಲೆಹೊಸೂರ, ಶಿಗ್ಲಿ, ದೊಡ್ಡೂರ, ರಾಮಗೇರಿ, ಬಸಾಪುರ, ಅಡರಕಟ್ಟಿ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದೆ. ಕೆಲ ಕಡೆ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿದು ಸಂಚಾರಕ್ಕೆ ಅಡಚಣೆಯಾಯಿತು.

ಮಳೆಯಾಗುತ್ತದೆ ಎಂಬ ಭರವಸೆಯೊಂದಿಗೆ ಬಿತ್ತಿದ್ದ ರೈತ ಸಮುದಾಯಕ್ಕೆ ಈ ಮಳೆ ಸಂತಸ ತಂದಿದೆ. ಅದರಲ್ಲೂ ಮಸಾರಿ ಜಮೀನಿನ ಬೆಳೆಗಳಿಗೆ ಸಾಕಷ್ಟು ಪೂರಕ ಮಳೆಯಾಗಿದೆ. ಕೃಷಿ ಕಾರ್ಯಗಳಿಗೆ ತೆರಳಿದ್ದ ರೈತರು ಮಧ್ಯಾಹ್ನಕ್ಕೆ ಮನೆಯತ್ತ ಸಾಗಿ ಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net