ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ನ್ಯಾಯಾಂಗ ತನಿಖೆಗೆ ಆಗ್ರಹ

IMG-20241208-WA0066.jpg
Published on

- ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ರಾಜ್ಯದಲ್ಲಿ ಶಿಶು, ಬಾಣಂತಿಯರ ಸಾವು ಪ್ರಕರಣಗಳನ್ನು ಹೈಕೋರ್ಟ್ ನ್ಯಾಯಾಧೀಶರ ಸುರ್ಪದಿಯಲ್ಲಿಯೇ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.

ನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಾಸನ ಸಮಾವೇಶ ಮುಖ್ಯವಾಯಿತು ವಿನಃ ಬಳ್ಳಾರಿಯಲ್ಲಿನ ಬಾಣಂತಿಯರ ಸಾವು ಮುಖ್ಯವಾಗಲಿಲ್ಲ. ವಿರೋಧಪಕ್ಷದ ನಾಯಕರು ಭೇಟಿ ನೀಡಿದ ಎರಡು ದಿನಗಳ ಬಳಿಕ ಆರೋಗ್ಯ ಸಚಿವರು ಬಳ್ಳಾರಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಅಲ್ಲದೆ, ಪ್ರತಿಪಕ್ಷಗಳು ಒತ್ತಾಯ ಮಾಡಿದ ಬಳಿಕ ಪರಿಹಾರ ಘೋಷಣೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಕಳಪೆ ಮಟ್ಟದ ಔಷಧಗಳ ವಿತರಣೆ ಆಗುತ್ತಿರುವುದರಿಂದ ಸಾವು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧಗಳು ಮಾರಾಟಕ್ಕಿಲ್ಲ ಎಂದ ಲೇಬಲ್ ಹಾಕಬೇಕು. ಆದರೆ, ಯಾವುದೇ ಔಷಧ, ಮಾತ್ರೆ ಪ್ಯಾಕೇಟ್ ಮೇಲೆ ನಾಟ್ ಫಾರ್ ಸೇಲ್ ಎಂದು ಲೇಬಲ್ ಹಾಕಿಲ್ಲ. ಕಳಪೆ ಔಷಧಗಳ ನಿಯಂತ್ರಣ ಮಾಡಲು ಆರೋಗ್ಯ ಇಲಾಖೆಯ ಬಳಿ ಡ್ರಗ್ಸ್ ಇನ್ಸ್‌ಪೆಕ್ಟರ್‌ಗಳು ಇಲ್ಲವೇ ಇಲ್ಲ. ಇನ್ನೂ ಔಷಧ ನಿಯಂತ್ರಣಕ್ಕೆ ಹೇಗೆ ಬರುತ್ತದೆ.ಔಷಧ ಮಾಫಿಯ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸೇರಿ ರಾಜ್ಯದ ವಿವಿಧ ಕಡೆ ಶಿಶು, ಬಾಣಂತಿಯರ ಸಾವು ವಿಷಯ ಪ್ರಸ್ತಾಪಿಸಲಾಗುತ್ತದೆ. ಸರ್ಕಾರ ಯಾವ ರೀತಿಯ ಉತ್ತರಿಸುತ್ತದೆ ಎಂಬುದನ್ನು ನಾವು ಕಾಯ್ದು ನೋಡುತ್ತಿದ್ದೇವೆ. ಈ ವಿಷಯದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ಅಲ್ಲದೆ, ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಬಡವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಶಶಿಕಲಾ ಜೋಲ್ಲೆ, ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಮಹಿಳಾ ಘಟಕದ ಮುಖಂಡೆ ಡಾ.ಸೋನಾಲಿ ಸರ್ನೋಬತ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net