

ಬೆಂಗಳೂರು: ಗಣೇಶ ಮೂರ್ತಿ ಮೆರವಣಿಗೆಯ ವೇಳೆ ಮದ್ಯದ ಅಮಲಿನಲ್ಲಿ ಡ್ಯಾನ್ಸ್ ಮಾಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಯುವಕನಿಗೆ ಡ್ರ್ಯಾಗರ್‌ನಿಂದ ಹೊಟ್ಟೆಗೆ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಆಡುಗೋಡಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಆಡುಗೋಡಿಯ ಎ.ಕೆ ಕಾಲೋನಿ ನಿವಾಸಿ ಶ್ರೀನಿವಾಸ (೨೫) ಕೊಲೆಯಾದ ಯುವಕ.
ಶ್ರೀನಿವಾಸ್ ಸಾವನ್ನಪ್ಪಿದ್ದರೆ, ಶ್ರೀನಿವಾಸ್ ತಾಯಿ ಇಂದಿರಾ ಮತ್ತು ರಂಜಿತ್ ಎಂಬುವವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಿವಾಸ್ ಕೊರಿಯರ್ ಬಾಯ್ ವೃತ್ತಿ ಮಾಡುತ್ತಿದ್ದನು. ಶ್ರೀನಿವಾಸ, ವಿನಯ್, ಅಲೆಕ್ಸ್, ರಂಜಿತ್, ಪ್ರಶಾಂತ್ ಇತರೆ ಸ್ನೇಹಿತರೆಲ್ಲ ಸೇರಿ ಗಣೇಶ ಹಬ್ಬದಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ಹೋಗುವಾಗ ಡ್ಯಾನ್ಸ್ ಮಾಡುವ ವಿಚಾರಕ್ಕೆ ವಿನಯ್ ಹಾಗೂ ಶ್ರೀನಿವಾಸ ನಡುವೆ ಜಗಳ ನಡೆದಿತ್ತು. ಭಾನುವಾರ ರಾತ್ರಿ ಮತ್ತೊಂದು ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಯುತ್ತಿತ್ತು. ರಾತ್ರಿ ೧೦ ಗಂಟೆಯ ವೇಳೆ ಗಣೇಶ ಮೂರ್ತಿ ವಿಸರ್ಜನೆಗಾಗಿ ಶ್ರೀನಿವಾಸ ಮನೆಯ ಮುಂದೆ ಮೆರವಣಿಗೆ ಹೋಗುತ್ತಿದ್ದಾಗ ಶ್ರೀನಿವಾಸ ನಮ್ಮ ಮನೆ ಮುಂದೆ ಡ್ಯಾನ್ಸ್ ಮಾಡಬೇಡಿ ಎಂದು ಹೇಳಿದಾಗ ಎರಡು ಗುಂಪಿನ ನಡುವೆ ಜಗಳವಾಗಿದೆ. ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದರು. ಕೆಲ ಸಮಯದ ನಂತರ ವಿನಯ್, ರಂಜಿತ್ ಇನ್ನಿತರರು ಶ್ರೀನಿವಾಸ ಮನೆ ಬಳಿ ಹೋಗಿ ಮತ್ತೆ ಗಲಾಟೆ ಮಾಡಿ ನಮಗೇ ಡ್ಯಾನ್ಸ್ ಮಾಡಬೇಡ ಎನ್ನುತ್ತೀಯಾ ಎಂದು ಕೂಗಾಡುತ್ತಾ, ಮನೆಯಿಂದ ಹೊರಗೆ ಬಂದ ಶ್ರೀನಿವಾಸ ಜತೆಗೆ ಜಗಳವಾಡಿ ಡ್ರ್ಯಾಗರ್‌ನಿಂದ ಹೊಟ್ಟೆಗೆ ಇರಿದಿದ್ದಾರೆ. ಆ ವೇಳೆ ಶ್ರೀನಿವಾಸ ತಾಯಿ ಇಂದ್ರಮ್ಮ ಜಗಳ ಬಿಡಿಸಲು ಮಧ್ಯ ಬಂದಾಗ ಅವರಿಗೂ ಇರಿತದಿಂದ ಗಾಯವಾಗಿದೆ. ತಕ್ಷಣ ಶ್ರೀನಿವಾಸನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಆಡುಗೋಡಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ಕೃತ್ಯದಲ್ಲಿ ಐದಾರು ಮಂದಿ ಭಾಗಿಯಾಗಿದ್ದು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.