ಅಂಗಡಿ ಮಾಲೀಕರು, ಅಧಿಕಾರಿಗಳ ನಡುವೆ ವಾಗ್ವಾದ

nela
Published on

ನೆಲಮಂಗಲ: ನೆಲಮಂಗಲದಿಂದ ಸೊಂಡೇಕೊಪ್ಪ ಮುಖ್ಯರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ, ರಸ್ತೆ ಅಕ್ಕಪಕ್ಕದಲ್ಲಿರುವ ಮನೆಗಳು, ಅಂಗಡಿ ಮಳಿಗೆಗಳು, ಫುಟ್‌ಪಾತ್, ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಮಾಲೀಕರಿಗೆ ಸೂಚಿಸಿದರು.

ಅಂಗಡಿ ಮಾಲೀಕರಿಗೆ ಯಾವುದೇ ಮಾಹಿತಿ ನೀಡದೆ, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಏಕಾಏಕಿ ಅಂಗಡಿ ಬಳಿ ಬಂದು ಸರ್ವೇಕಾರ್ಯ ನಡೆಸಿ ಗುರುತು ಮಾಡಿದ ಕಾರಣ ಅಂಗಡಿ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.

ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ಸೊಂಡೇಕೊಪ್ಪದಿಂದ ತಾಲೂಕಿನ ಗಡಿವರೆಗಿನ ರಸ್ತೆಯನ್ನು ಚತುಷ್ಟಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಿದ ಕಾರಣ ರಸ್ತೆ ವಿಸ್ತರಣೆ ಕುರಿತು ಸರ್ವೇ ಕಾರ್ಯ ನಡೆಸಿ ಗುರುತು ಮಾಡಲಾಗಿದೆ. ಮಾಲೀಕರಿಗೆ ತೆರವುಗೊಳಿಸಿಕೊಳ್ಳುವಂತೆ ನಿರ್ದೇಶಕ ನೀಡಿದ ಬಳಿಕ ನೋಟಿಸ್ ನೀಡಿ ತೆರವು ಕಾರ್ಯ ಮಾಡಲಾಗುವುದು. ನಗರದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುತ್ತಿದ್ದು ಸಾರ್ವಜನಿಕರು ಸಹಕಾರ ನೀಡಬೇಕೆಂದು ತಿಳಿಸಿದರು.

ನಗರದ ಸೊಂಡೆಕೊಪ್ಪ ವೃತ್ತದ ಬಳಿ ಸೊಂಡೆಕೊಪ್ಪ ಮಾರ್ಗದ ತಾಲೂಕಿನ ಗಡಿವರೆಗಿನ ರಸ್ತೆಯನ್ನು ಚತುಷ್ಟಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 17 ಕೋಟಿ ವೆಚ್ಚದ ಅನುದಾನ ಬಿಡುಗಡೆಯಾಗಿದ್ದು, ಜ.27ರಂದು ಶಾಸಕ ಎನ್.ಶ್ರೀನಿವಾಸ್ ನೇತೃತ್ವದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net