

ಕಿಕ್ಕೇರಿ: ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ಬುಧವಾರ ಅರೆಕಲ್ಲಮ್ಮ ದೇವಿ ಹಬ್ಬ ಸಡಗರದಿಂದ ಜರುಗಿತು.
ಗ್ರಾಮದ ರಾಮಮಂದಿರದ ಕೇಂದ್ರ ಸ್ಥಳದಿಂದ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಚಾಲನೆ ನೀಡಲಾಯಿತು. ಸೋಮನ ಕುಣಿತ, ಮಂಗಳವಾದ್ಯ, ತಮಟೆ ವಾದ್ಯದೊಂದಿಗೆ ದೇವಿಯ ಮೆರವಣಿಗೆ ಗ್ರಾಮದ ಹೊರವಲಯದಲ್ಲಿರುವ ಅರೆಕಲ್ಲಮ್ಮ ದೇಗುಲಕ್ಕೆ ಸಾಗಿತು. ದೇವರ ಒಕ್ಕಲಿನವರು ತಮ್ಮ ತೋಟದಲ್ಲಿ ದೇವರ ಗದ್ದುಗೆ ನಿರ್ಮಿಸಿ ಕುರಿ ಬಲಿ ನೀಡಿದರು. ಮತ್ತೆ ಕೆಲವರು ದೇಗುಲದ ದ್ವಾರಬಾಗಿಲು ಬಳಿ ತೀರ್ಥಪ್ರೋಕ್ಷಣೆ ಮಾಡಿ ಕುರಿ ಬಲಿ ಅರ್ಪಿಸಿದರು.
ತಂಬಿಟ್ಟಿನ ಆರತಿ: 10 ವರ್ಷಗಳ ನಂತರ ವಿಜೃಂಭಣೆಯಿಂದ ಜರುಗಿದ ಹಬ್ಬದಲ್ಲಿ ಮಹಿಳೆಯರು ತಂಬಿಟ್ಟಿನಲ್ಲಿ ಹೂವಿನ ಮಡೆ ತಯಾರಿಸಿ, ದೀಪ ಬೆಳಗಿಸಿಕೊಂಡು ತಲೆಯ ಮೇಲೆ ಹೊತ್ತು ಸಾಗಿದರು. ಗ್ರಾಮದ ರಸ್ತೆಯನ್ನು ಗ್ರಾಮಸ್ಥರು ಶುಚಿಗೊಳಿಸಿ ತಳಿರುತೋರಣ ಕಟ್ಟಿದ್ದರು. ಗುಡಿಯ ಬಳಿ ಶುಭ್ರ ವಸ್ತ್ರದ ಮೇಲೆ ತಂಬಿಟ್ಟಿನ ಮಡೆಯನ್ನು ಮಹಿಳೆಯರು ಇಟ್ಟು ದೇವಿಗೆ ಆರತಿ ಬೆಳಗಿದರು. ಇದೇ ವೇಳೆ ಪಟಾಕಿ, ಮದ್ದುಗುಂಡುಗಳನ್ನು ಸುಡಲಾಯಿತು. ಇನ್‌ಸ್ಪೆಕ್ಟರ್ ರೇವತಿ ಸೂಕ್ತ ಬಂದೋ ಬಸ್ತ್ ಕಲ್ಪಿಸಿದ್ದರು.