

ಬೇಲೂರು: ಕಾಡಾನೆಗಳ ದಾಳಿಯಿಂದ ಬೆಳೆ ಹಾಗೂ ಪ್ರಾಣ ಹಾನಿಯಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಫಿ ಬೆಳಗಾರರ ಸಂಘ ಹಾಗೂ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಅರೇಹಳ್ಳಿ ಪಟ್ಟಣ ಬಂದ್ ಯಶಸ್ವಿಯಾಯಿತು.
ಬಂದ್ ಹಿನ್ನೆಲೆಯಲ್ಲಿ ಅಂಗಡಿ-ಮುಂಗಟ್ಟು, ಕೆಲ ಶಾಲೆ-ಕಾಲೇಜು. ಹೋಟೆಲ್‌ಗಳು ಸೇರಿದಂತೆ ಎಲ್ಲ ಉದ್ಯಮವನ್ನೂ ಬಂದ್ ಮಾಡಲಾಗಿತ್ತು. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಬಂದೋ ಬಸ್ತ್ ಮಾಡಲಾಗಿತ್ತು. ಇದೇ ವೇಳೆ ಪ್ರತಿಭಟನಾಕಾರರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಸಚಿವರು ಆಗಮಿಸಬೇಕೆಂದು ಪಟ್ಟ ಹಿಡಿದ ಪ್ರತಿಭಟನಾಕಾರರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬೇಡಿಕೆಗಳನ್ನು ಕೆಲ ದಿನಗಳಲ್ಲೆ ಈಡೇರಿಸಬೇಕು. ಇಲ್ಲದಿದ್ದಲ್ಲಿ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿ ಪ್ರತಿಭಟನೆ ಅಂತ್ಯಗೊಳಿಸಿದರು.
ಬೆಳೆಗಾರರ ಪ್ರತಿಭಟನೆಗೆ ಅರೇಹಳ್ಳಿ ಪಟ್ಟಣದ ವರ್ತಕರು ಬೆಂಬಲ ಸೂಚಿಸಿದರು. ಅಲ್ಲದೆ ಪ್ರತಿಭಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತಡವಾಗಿ ಬಂದಿದ್ದಕ್ಕೆ ಶಾಸಕ ಎಚ್.ಕೆ.ಸುರೇಶ್ ಹಾಗೂ ಸಿಮೆಂಟ್ ಮಂಜು ಹಾಗೂ ಬೆಳೆಗಾರರು ಆಕ್ರೋಶ ವ್ಯಕ್ತ ಪಡಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಕಾಡಾನೆ ದಾಳಿಯಿಂದ ಮಲೆನಾಡು ಭಾಗದಲ್ಲಿ ಬೆಳೆ ಹಾಗೂ ಪ್ರಾಣ ಹಾನಿ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳಾಗಲೀ ಅಥವಾ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಈ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೆಲಸ ಮಾಡಲು ಸಾಧ್ಯವಿಲ್ಲವೆಂದರೆ ಸಮವಸ್ತ್ರ ಕಳಚಿಟ್ಟು ಮನೆಗೆ ಹೋಗುವುದು ಒಳ್ಳೆಯದು. ನಾನು ಏನಾದರೂ ಮಾತನಾಡಿದರೆ ಫೋಟೋ ತೆಗೆದು ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಇವರಿಗೆ ತಾಕತ್ತಿದ್ದರೆ ಇವತ್ತು ನನ್ನ ಮೇಲೆ ದೂರು ದಾಖಲಿಸಲಿ ಎಂದು ಸವಾಲು ಹಾಕಿದರು.
ತಾಲೂಕಿನ ಮಲೆನಾಡು ಭಾಗದ ಕಾಡಾನೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರಿಸಬೇಕೆಂದು 120 ಬಾರಿ ಪತ್ರ ಬರೆದು ಅರಣ್ಯ ಮಂತ್ರಿಗಳೊಂದಿಗೆ ಖುದ್ದು ಚರ್ಚೆ ನಡೆಸಿದರೂ ಸ್ಪಂದಿಸುತ್ತಿಲ್ಲ. ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಬೆಳೆಗಾರರು, ರೈತರು ಅರೇಹಳ್ಳಿ ಪಟ್ಟಣ ಬಂದ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ. ಅಲ್ಲದೆ ಪೊಲೀಸ್‌ನವರು ಪ್ರತಿಭಟನೆಗೆ ಹೆಚ್ಚು ಜನರು ಭಾಗವಹಿಸದಂತೆ ತಡೆಯಲು ಅರೇಹಳ್ಳಿ ಪಟ್ಟಣಕ್ಕೆ ಬರುವ ನಾಲ್ಕು ಮಾರ್ಗಗಳಲ್ಲೂ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಿ ಬೇರೆ ಮಾರ್ಗಗಳಲ್ಲಿ ಕಳಿಸುವ ಷಡ್ಯಂತ್ರ ಮಾಡಿದ್ದಾರೆ. ರೈತರ ಪ್ರತಿಭಟನೆ ತಡೆಯುವ ಹಕ್ಕು ಯಾರಿಗೂ ಇಲ್ಲ. ಈಗಲೇ ಬ್ಯಾರಿಕೇಡ್ ತೆಗೆದರೆ ಒಳಿತು. ಪೊಲೀಸರ ದೌರ್ಜನ್ಯ ಕಂಡಾಗ ಸುಮ್ಮನೆ ಕೂತು ನೋಡುವವನು ನಾನಲ್ಲ. ನಾನು ಜನ ಸೇವಕ. ಅವರಿಗಾಗಿ ಜೈಲಿಗೆ ಹೋಗಲು ಮತ್ತು ಜೀವ ಕೊಡಲು ಸಿದ್ಧ ಎಂದು ಹೇಳಿದರು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸಕಲೇಶಪುರ-ಬೇಲೂರು ತಾಲೂಕಿನಲ್ಲಿ ಈಗಾಗಲೇ 80 ಜನ ಅಮಾಯಕರು ಆನೆ ದಾಳಿಗೆ ತುತ್ತಾಗಿದ್ದಾರೆ. ಇಷ್ಟಾದರೂ ಸರ್ಕಾರಕ್ಕಾಗಲೀ. ಅರಣ್ಯ ಸಚಿವರಿಗಾಗಲೀ, ಇಲಾಖೆಯ ಅಧಿಕಾರಿಗಳಿಗಾಗಲೀ ಈ ಬಗ್ಗೆ ಸ್ವಲ್ಪವೂ ಕನಿಕರ ಇಲ್ಲ. ತೋಟದ ಕಾರ್ಮಿಕರು, ಮಾಲೀಕರು ಮನೆಯಿಂದ ಹೊರಗೆ ಬರಲು ಹೆದರುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಬೇಲೂರು-ಸಕಲೇಶಪುರದಲ್ಲಿ ಜನರ ಜೀವಗಳನ್ನು 15 ಲಕ್ಷ ರೂ.ಗೆ ಒತ್ತೆ ಇಟ್ಟಿದ್ದಾರೆ. ಕಾಡಾನೆಗಳ ಸಮಸ್ಯೆಗಳ ಬಗ್ಗೆ ನಾನು ಮತ್ತು ಶಾಸಕ ಎಚ್.ಕೆ.ಸುರೇಶ್ ಸದನದಲ್ಲಿ ಸರ್ಕಾರದ ಗಮನ ಸೆಳೆದು ಕಾಡಾನೆ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕೈಗೊಳ್ಳಲು ಒತ್ತಾಯಿಸುತ್ತೇವೆ. ಇದಕ್ಕೂ ಸರ್ಕಾರ ಬಗ್ಗದಿದ್ದರೆ ಹೋರಾಟಕ್ಕೆ ಸಿದ್ಧರಾಗೋಣ ಎಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ಮಾತನಾಡಿ, ಬೇಲೂರು ಭಾಗಲ್ಲಿರುವ ಆನೆಗಳನ್ನು ಕಾರ್ಯಾಚರಣೆ ಮೂಲಕ ಓಡಿಸಲು ಕ್ರಮ ಕೈಗೊಳ್ಳಲು ಎಕ್ಸ್‌ಫರ್ಟ್‌ಗಳನ್ನು ಕರೆಸಿ ಆನೆಗಳನ್ನು ಎಲ್ಲಿಂದ ಎಲ್ಲಿಗೆ ಕಳುಹಿಸಬೇಕು ಎಂದು ಸಭೆ ಕರೆದು ಚರ್ಚಿಸಲಾಗಿದೆ. ಸಕಲೇಶಪುರದಲ್ಲಿ ಇಟಿಎಫ್ ಕಚೇರಿ ತೆರೆಯಲು ಎಲ್ಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಫೆ.27ರಂದು ಮೂರೂ ಜಿಲ್ಲೆಗಳ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.
ಅರೇಹಳ್ಳಿ ಕಾಫಿ ಬೆಳೆಗಾರರ ಸಂಘದ ಬಸವರಾಜು, ಉಪಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಸಂಜಯ್, ಡಿಎಫ್‌ಓ ಇಟಿಎಫ್ ಸಹನ ಕುಮಾರ್, ತಹಸೀಲ್ದಾರ್ ಮಮತಾ, ಡಿವೈಎಸ್ಪಿ ಲೋಕೇಶ್, ತಾಪಂ ಮಾಜಿ ಸದಸ್ಯ ಸೋಮಯ್ಯ, ವಕೀಲ ರಾಜು ಜತೆಗೆ ರೈತ ಸಂಘ, ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಒಕ್ಕೂಟ, ಭೂಮಿಪುತ್ರ ಸಂಘ ಸೇರಿದಂತೆ ವಿವಿಧ ಪ್ರಗತಿ ಪರ ಸಂಘಟನೆ ಮುಖಂಡರು, ಕಾಫಿ ಬೆಳೆಗಾರರು, ಕಾರ್ಮಿಕರು, ಅರಣ್ಯಾಧಿಕಾರಿಗಳು, ಆರಕ್ಷಕ ಸಿಬ್ಬಂದಿ ಇದ್ದರು.
ಫೆ.27ರಂದು ಹಾಸನ-ಕೊಡಗು-ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರು ಮತ್ತು ಅಲ್ಲಿನ ಶಾಸಕರು, ಸಿಸಿಎಫ್, ಡಿಎಫ್‌ಒಗಳ ಸಭೆಯನ್ನು ಹಾಸನದಲ್ಲಿ ಕರೆದು ಅಂತಿಮ ತೀರ್ಮಾನ ಕೈಗೊಳ್ಳಬೇಕು. ಕಾಡಾನೆಗಳ ಸಮಸ್ಯೆ ಇರೋದು ಅರೇಹಳ್ಳಿ-ಸಕಲೇಶಪುರದಲ್ಲಿ. ಆದರೆ ನೀವು ಬೇಲೂರು, ಹಾಸನದಲ್ಲಿ ಕಚೇರಿ ತೆರೆದರೆ ಆನೆ ಬಗ್ಗೆ ಏನು ತಿಳಿಯುತ್ತದೆ? ಚಿಕ್ಕಮಗಳೂರಿನಲ್ಲಿ ಪ್ರಭಾವಿ ಸಚಿವರಿದ್ದು, ಅವರದ್ದೇ ತೋಟ ಇದೆ. ಅದಕ್ಕೆ ಅಲ್ಲಿನ ಅಧಿಕಾರಿಗಳು ಕಾಡಾನೆಗಳನ್ನು ಬೇಲೂರು ಕಡೆಗೆ ಓಡಿಸುತ್ತಾರೆ. ಮೊದಲು ಕಾಡಾನೆಗಳನ್ನು ಶಾಶ್ವತವಾಗಿ ಓಡಿಸುವ ಕೆಲಸವಾಗಬೇಕು. ಇಲ್ಲದಿದ್ದಲ್ಲಿ ಜನರೊಂದಿಗೆ ಉಗ್ರ ಹೋರಾಟಕ್ಕೆ ಮುಂದಾಗಲಾಗುವುದು. ನೀವು ಏನು ಬೇಕಾದರೂ ಮಾಡಿಕೊಳ್ಳಿ. ಕೇಸ್‌ಗಳನ್ನು ಹಾಕಿ ಜೈಲಿಗೆ ಕಳುಹಿಸಿ ನಾವು ಸಿದ್ಧರಿದ್ದೇವೆ.
ಎಚ್.ಕೆ.ಸುರೇಶ್ ಶಾಸಕ, ಬೇಲೂರು