5 ಪಿಸ್ತೂಲು ಜಪ್ತಿ, 10 ಮಂದಿ ಬಂಧನ

HOSURU GUN 02
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯ ಖಾಸಗಿ ಭದ್ರತಾ ಸಿಬ್ಬಂದಿ ಕಾರಿನಲ್ಲಿದ್ದ 5 ಪಿಸ್ತೂಲುಗಳನ್ನು ಹೊಸೂರು ನ್ಯಾಯಾಲಯದ ಆವರಣದಲ್ಲಿ ಶನಿವಾರ ಪೊಲೀಸರು ಜಪ್ತಿ ಮಾಡಿದ್ದು, 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಸರ್ಜಾಪುರ ಸಮೀಪದ ಸೂಳಕುಂಡ ಗ್ರಾಮದ ರೇವಣ್ಣ (34), ನವೀನ್(24) ಪುನೀತ್(29) ಪ್ರವೀಣ್(26) ಶಿವಕುಮಾರ್(28) ಮಹೇಶ್ (24) ಮನು ಚಂದ್ರನ್ (30) ಕೃಷ್ಣ (52) ಮೋಹನ್ (50) ಸೇರಿ 10 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರೇವಣ್ಣ ಕೊಲೆ ಪ್ರಕರಣ ಪ್ರಮುಖ ಆರೋಪಿಯಾಗಿದ್ದು, ಬೆಂಗಳೂರಿನಿಂದ ತಮಿಳುನಾಡಿಗೆ ಪ್ರವೇಶಿಸುವಾಗ ಪಿಸ್ತೂಲು ಸಾಗಿಸಲು ಪೊಲೀಸರಿಂದ ಅನುಮತಿ ಪಡೆಯಬೇಕು. ಅಲ್ಲದೆ ಕೊಲೆ ಆರೋಪಿಗೆ ಪಿಸ್ತೂಲ್ ಪರವಾನಗಿ ಏತಕ್ಕೆ? ಅಲ್ಲದೆ ಪರವಾನಿ ಪಡೆದವರಷ್ಟೇ ಪಿಸ್ತೂಲ್ ಹೊಂದಿರಬೇಕು ಆದರೆ ಈತನ ಭದ್ರತಾ ಸಿಬ್ಬಂದಿ ವಾಹನದಲ್ಲಿ ಪಿಸ್ತೂಲುಗಳನ್ನು ಏಕೆ ಇರಿಸಿದ್ದರು ಎಂಬಿತ್ಯಾದಿ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸೆ.18ರಂದು ನಡೆದಿದ್ದ ಕೊಲೆ:

ಕೃಷ್ಣಗಿರಿ ಜಿಲ್ಲೆ ಹೊಸೂರು ಸಮೀಪದ ಕೋಳದಾಸಪುರಂನ ಮದ್ಯದಂಗಡಿ ಬಳಿ ಸೆ.18ರಂದು ಯುವಕನೊಬ್ಬನ ಕೊಲೆ ನಡೆದಿತ್ತು. ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಮೃತ ಬೆಂಗಳೂರಿನ ಸರ್ಜಾಪುರ ಸಮೀಪದ ಸೂಳಕುಂಟ ಕಾಲನಿ ರೇವಂತ್‌ಕುಮಾರ್ (26) ಎಂದು ಪೊಲೀಸರು ಪತ್ತೆ ಹಚ್ಚಿದ್ದರು. ಕೊಲೆ ಪ್ರಕರಣದಲ್ಲಿ ಅದೇ ಗ್ರಾಮದ ರೇವಣ್ಣ ಹಾಗೂ ಸಹಚರರನ್ನು ಬಂಧಿಸಿದ ಪೊಲೀಸರು ಆರೋಪಿಗಳನ್ನು ಪೊಲೀಸರಿಗೆ ಕಳುಹಿಸಿದ್ದರು. ಗಣೇಶಮೂರ್ತಿ ಪ್ರತಿಷ್ಟಾಪನೆ ವಿಚಾರದಲ್ಲಿ ರೇವಂತ್ ಕುಮಾರ್ ಹಾಗೂ ಆರೋಪಿ ರೇವಣ್ಣ ನಡುವೆ ಜಗಳ ನಡೆದು ಕೊಲೆಗೆ ಕಾರಣವಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು. ಇದಾದ ಬಳಿಕ ಪ್ರಮುಖ ಆರೋಪಿ ರೇವಣ್ಣ ಜಾಮೀನಿನ ಮೇಲೆ ಹೊರ ಬಂದಿದ್ದು, ಹೊಸೂರು ನ್ಯಾಯಾಲಯಕ್ಕೆ ಸಹಿ ಹಾಕಲು ಶನಿವಾರ ಬಂದಿದ್ದ. ಅವನೊಂದಿಗೆ ಭದ್ರತೆಗಾಗಿ ಇನ್ನೊಂದು ಕಾರಿನಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಆಗಮಿಸಿದ್ದರು. ಕಾರು ಹೊಸೂರು ಕೋರ್ಟ್ ಪ್ರವೇಶಿಸಿದಾಗ ಬಾಗಲೂರು ಇನ್ಸ್‌ಪೆಕ್ಟರ್ ಪ್ರಕಾಶ್ ಮತ್ತು ನಗರ ಪೊಲೀಸ್ ಸಹಾಯಕ ನಿರೀಕ್ಷಕ ಪ್ರಭಾಕರ್ ಕಾರನ್ನು ತಪಾಸಣೆ ನಡೆಸಿದ ವೇಳೆ ಕಾರಿನಲ್ಲಿ ಸಜೀವ ಗುಂಡುಗಳಿದ್ದ 5 ಪಿಸ್ತೂಲುಗಳು ಪತ್ತೆಯಾಗಿದ್ದವು. ಪಿಸ್ತೂಲು ಸಮೇತ ಕಾರನ್ನು ಜಪ್ತಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net