

ಪುತ್ತೂರು: ಅಕ್ಟೋಬರ್ ಮೊದಲ ವಾರದಿಂದ ಹೊಸ ಕೊಲಿನ ಅಡಕೆ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಧಾರಣೆಯಲ್ಲಿ ಇತಿಹಾಸ ಸೃಷ್ಟಿಸಿದೆ.
ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಆರಂಭದಲ್ಲಿ ಹೊಸ ಅಡಕೆ ಕ್ವಿಂಟಾಲ್‌ಗೆ 27,300-27,500 ರೂ. ಧಾರಣೆ ಇತ್ತು. ತಾಜಾ ಅಡಕೆ ಮಾರುಕಟ್ಟೆಗೆ ಪ್ರವೇಶಿಸಿದ ಎರಡನೇ ವಾರದಲ್ಲೇ ಪ್ರತಿ ಕೆ.ಜಿ.ಗೆ 25 ರೂ. ಏರಿಕೆಯಾಗುವ ಮೂಲಕ 300 ರೂಪಾಯಿ (ಗುಣಮಟ್ಟಕ್ಕೆ ತಕ್ಕಂತೆ) ತಲುಪಿದೆ. ಇದಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಖಾಸಗಿ ವರ್ತಕರು, ಪ್ರತಿ ಕೆ.ಜಿ. ಅಡಕೆಯನ್ನು ಗರಿಷ್ಠ 305 ರೂ.ವರೆಗೂ ಖರೀದಿಸುತ್ತಿದ್ದಾರೆ. ಮಂಗಳೂರು ಎಪಿಎಂಸಿಯಲ್ಲಿ 310 ಗರಿಷ್ಠ ಧಾರಣೆ (ವಾಡಿಕೆ 280 ರೂ.) ನೀಡಲಾಗಿದೆ. ಮಳೆಗಾಲದ ಅಡಕೆಗೆ ಈ ಪರಿ ಧಾರಣೆ ಏರಿಕೆ ಕಂಡಿರುವುದು ಇದೇ ಮೊದಲು.
ಸಿಂಗಲ್ ಚೋಲ್‌ಗೂ ಏರಿಕೆ: ಹೊಸ ಅಡಕೆ(ಸಿಂಗಲ್ ಚೋಲ್) 360 ರೂ, ಹಳೇ ಅಡಕೆ (ಡಬಲ್ ಚೋಲ್) 400 ರೂ.ನಲ್ಲಿ ಸ್ಥಿರವಾಗಿತ್ತು. ಈ ಪೈಕಿ ಸಿಂಗಲ್ ಚೋಲ್ ಅಡಕೆ ಧಾರಣೆಯೂ ಏರುಗತಿಯಲ್ಲಿದೆ. 15 ರೂಪಾಯಿ ಹೆಚ್ಚಳದೊಂದಿಗೆ ಬುಧವಾರ ಹೊಸ ಅಡಕೆ(ಸಿಂಗಲ್ ಚೋಲ್) 380 ರೂ.ಗೆ ಕ್ಯಾಂಪ್ಕೊದಲ್ಲಿ ಖರೀದಿಯಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ 390ರಿಂದ 395 ರೂಪಾಯಿವರೆಗೂ ಖರೀದಿಸಲಾಗುತ್ತಿದೆ. ಹಳೇ ಅಡಕೆ (ಡಬಲ್ ಚೋಲ್) ಕ್ಯಾಂಪ್ಕೊದಲ್ಲಿ 400 ರೂ.ನಲ್ಲೇ ಸ್ಥಿರವಾಗಿದೆ. ಖಾಸಗಿ ವರ್ತಕರು 395- 399ರೂ.ವರೆಗೆ ಖರೀದಿ ನಡೆಸುತ್ತಿದ್ದಾರೆ.
ಮಾರುಕಟ್ಟೆಗೆ ಸೆಳೆಯುವ ತಂತ್ರ: ಉತ್ತರ ಭಾರತದ ಜನರ ಜೀವನಶೈಲಿಯಲ್ಲಿ ಮುಂದಿನ ಚಳಿಗಾಲಕ್ಕೆ ಅಡಕೆ ಹಾಗೂ ಅಡಕೆ ಉತ್ಪನ್ನ ಅನಿವಾರ್ಯ. ಸದ್ಯಕ್ಕೆ ಬೆಲೆ ಏರಿಸಿಯಾದರೂ ಅಡಕೆ ಕೊರತೆ ನೀಗಿಸುವ ತಂತ್ರ ವರ್ತಕರದ್ದು. ಇನ್ನು 2019-20ನೇ ಆದಾಯ ವರ್ಷದಲ್ಲಿ ಕರಾವಳಿಯಾದ್ಯಂತ ಅಡಕೆ ಕೊರತೆ ಹೆಚ್ಚಾಗಿದ್ದು, ಬೇಡಿಕೆಯೂ ಹೆಚ್ಚಾಗಿದೆ. ಈ ಕಾರಣಕ್ಕಾಗಿ ಬೆಲೆ ಏರಿಕೆಯಾಗಿದೆ ಎಂಬುದು ಮಾರುಕಟ್ಟೆ ತಜ್ಞರ ವಿಶ್ಲೇಷಣೆ. 2 ತಿಂಗಳ ಹಿಂದೆ ಅಡಕೆಗೆ 350 ರೂ. ಧಾರಣೆ ತಲುಪುತ್ತಿದ್ದಂತೆ ಕರಾವಳಿಯಾದ್ಯಂತ ಅಡಕೆ ಬೆಳೆಗಾರರಲ್ಲಿದ್ದ ದಾಸ್ತಾನು ಬಹುತೇಕ ಖಾಲಿಯಾಗಿತ್ತು. ಉತ್ತರ ಭಾರತದಲ್ಲೂ ಅಡಕೆಗೆ ಬೇಡಿಕೆ ಹೆಚ್ಚಾಗಿದ್ದು, ಕರಾವಳಿ ಸೇರಿದಂತೆ ವಿವಿಧ ಮೂಲಗಳ ಅಡಕೆ ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗದ ಕಾರಣ ಹೊಸ ಕೊಲಿನ ಅಡಕೆಯತ್ತ ಎಲ್ಲರ ಚಿತ್ತವಿತ್ತು. ಬೆಲೆ ಏರಿಕೆಯಾಗುವ ಸಾಧ್ಯತೆ ಹಾಗೂ ಹೊಸ ಕೊಲಿನ ಅಡಕೆ ಒಣಗಲು ಇನ್ನೂ ಕಾಲಾವಕಾಶ ಇರುವುದರಿಂದ ಪ್ರಸ್ತುತ ಹೊಸ ಕೊಲಿನ ಅಡಕೆ ಅಷ್ಟಾಗಿ ಮಾರುಕಟ್ಟೆ ಪ್ರವೇಶಿಸುತ್ತಿಲ್ಲ. ಆದರೆ ಉತ್ತರ ಭಾರತದಲ್ಲೂ ಅಡಕೆಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಬೆಲೆ ಏರಿಸಿ ಅಡಕೆ ಮಾರುಕಟ್ಟೆ ಪ್ರವೇಶಿಸುವಂತೆ ಮಾಡುವ ತಂತ್ರ ವರ್ತಕರದ್ದು.
ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾಗುವುದು ಸಹಜ. ಮಾರುಕಟ್ಟೆಗೆ ಅಡಕೆ ಬರುವ ಪ್ರಮಾಣ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯೂ ಹೆಚ್ಚಾಗುತ್ತಿದೆ. ಹಬ್ಬ, ಪೂಜಾ ಕಾರ್ಯಗಳು ಮುಂದಿನ ದಿನಗಳಲ್ಲಿ ಬರುವುದರಿಂದ ಸಹಜವಾಗಿ ಅಡಕೆ ಬೇಡಿಕೆ ಹೆಚ್ಚಾಗುತ್ತಿದೆ. ಸತೀಶ್ಚಂದ್ರ, ಕ್ಯಾಂಪ್ಕೊ ಅಧ್ಯಕ್ಷ