ಕೇರಳಕ್ಕೆ ಅಡಕೆ ಅಕ್ರಮ ಮಾರಾಟ

arecanut new
Published on

ಶ್ರವಣ್‌ಕುಮಾರ್ ನಾಳ ಪುತ್ತೂರು

ಲಾಕ್‌ಡೌನ್ ಪರಿಣಾಮ ರೈತ ವರ್ಗದ ಉತ್ಪನ್ನಗಳ ಮಾರಾಟಕ್ಕೆ ತೊಂದರೆಯಾಗಿದೆ. ಒಂದೆಡೆ, ಎಪಿಎಂಸಿ ಮೂಲಕ ರೈತರ ಸಂಕಷ್ಟವನ್ನು ಬಗೆಹರಿಸುವ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದೆಡೆ ಗ್ರಾಮೀಣ ಭಾಗಗಳಿಂದ ಅಡಕೆ ಖರೀದಿಸಿ ಸುಳ್ಯದ ಮೂಲಕ ಪಕ್ಕದ ಕೇರಳ ಹಾಗೂ ತಮಿಳುನಾಡಿಗೆ ಅಕ್ರಮವಾಗಿ ಅಡಕೆ ಸಾಗಿಸುವ ಜಾಲವೂ ಸಕ್ರಿಯವಾಗಿದೆ.

ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಕಾಡುದಾರಿ ಮೂಲಕ ಕೇರಳಕ್ಕೆ ಹಾಗೂ ಕೇರಳದಿಂದ ತಮಿಳುನಾಡಿಗೆ ಅಡಕೆ ಸಾಗಾಟ ಮಾಡಲಾತ್ತಿದೆ.

ಗ್ರಾಮಾಂತರ ಭಾಗದ ಹಳ್ಳಿಗಳಿಗೆ ಕೆಲ ವರ್ತಕರು ಹೋಗಿ ಅಡಕೆ ಧಾರಣೆ ಕುಸಿಯುತ್ತಿದೆ ಎಂದು ರೈತವರ್ಗದಲ್ಲಿ ಭಯ ಹುಟ್ಟಿಸಿ ಕಡಿಮೆ ದರದಲ್ಲಿ ಅಡಕೆ ಖರೀದಿ ಮಾಡುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಅಂತಾರಾಜ್ಯ ಗಡಿಗಳು ಪೂರ್ಣ ಪ್ರಮಾಣದಲ್ಲಿ ಬಂದ್ ಆಗಿರುವ ಕಾರಣ ಅಡಕೆ ಧಾರಣೆ ಕುಸಿದಿದೆ ಎಂದು ತಿಳಿದುಕೊಂಡು ರೈತ ವರ್ಗ ಕಡಿಮೆ ಬೆಲೆಗೆ ಅಡಕೆ ಮಾರಾಟ ನಡೆಸುತ್ತಾರೆ. ಈ ಅಡಕೆಯನ್ನು ಕೇರಳ ರಾಜ್ಯಕ್ಕೆ ಪೂರೈಕೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಕೇರಳ ಬಿಲ್, ತಮಿಳುನಾಡಿಗೆ ಸೇಲ್

ಕಡಬ, ಕಾಣಿಯೂರು ಹಾಗೂ ಗ್ರಾಮೀಣ ಪ್ರದೇಶದ ಕೆಲವು ಭಾಗಗಳಿಂದ ಪಿಕಪ್ ಮತ್ತು ಜೀಪ್‌ಗಳಲ್ಲಿ ಸುಳ್ಯ ತಾಲೂಕಿನ ಕೆಲ ಭಾಗಗಳಿಗೆ ಅಡಕೆ ಒಯ್ಯಲಾಗುತ್ತದೆ. ಅಲ್ಲಿ ದಾಸ್ತಾನು ಮಾಡಿ ನಂತರ ಪಿಕಪ್ ವಾಹನಗಳಲ್ಲಿ ಕಾಡು ದಾರಿ ಮೂಲಕ ಕೇರಳಕ್ಕೆ ತಲುಪಿಸಲಾಗುತ್ತಿದೆ. ಸುಳ್ಯ ಹಾಗೂ ಕೇರಳ ಗಡಿ ಭಾಗದ ಕೆಲವು ಪ್ರದೇಶಗಳಲ್ಲಿ ಅಡಕೆ ದಾಸ್ತಾನು ಮಾಡುವ ಮೂಲಕ ಸುಲಭವಾಗಿ ಕೇರಳ ರಾಜ್ಯಕ್ಕೆ ತಂದು ಅಲ್ಲಿಂದ ಕೇರಳ ಬಿಲ್ ಮೂಲಕ ತಮಿಳುನಾಡಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ.

ಎಪಿಎಂಸಿಯಿಂದ ಎಚ್ಚರಿಕೆ

ತರಕಾರಿ ಮಾರಾಟ ವಾಹನದಲ್ಲಿ ಅಡಕೆ ಖರೀದಿಸಲಾಗುತ್ತಿದೆ. ಗೇರುಬೀಜ ಖರೀದಿ ಎಂದು ಬಿಂಬಿಸಿ ಅಡಕೆ ವ್ಯಾಪಾರ ಮಾಡುತ್ತಿರುವ ಬಗ್ಗೆ ಎಪಿಎಂಸಿಗೆ ದೂರುಗಳು ಲಭಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ಎಪಿಎಂಸಿ ದಾಳಿ ನಡೆಸಿ, ವ್ಯಾಪಾರಿಗಳ ವ್ಯಾಪಾರ ಪರವಾನಗಿ ರದ್ದು ಮಾಡುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಕಡಬ ಭಾಗದಲ್ಲಿ ಬುಧವಾರ ಬಿಲ್ ಇಲ್ಲದ ವಾಹನಗಳಲ್ಲಿ ಸಾಗಾಟ ಮಾಡುತ್ತಿದ್ದ ಅಡಕೆಗೆ ಪುತ್ತೂರು ಎಪಿಎಂಸಿ ದಂಡ ವಿಧಿಸಿದೆ. ಈ ವೇಳೆ ಗಡಿಭಾಗದ ಮೂಲಕ ಕೇರಳಕ್ಕೆ ಅಡಕೆ ಅಕ್ರಮ ಮಾರಾಟ ಮಾಡುವ ವಿಚಾರ ಬೆಳಕಿಗೆ ಬಂದಿದೆ.

ಪ್ರತೀ ಕೆ.ಜಿ.ಗೆ 250- 275 ರೂ. ಪ್ರಸ್ತುತ ಎಪಿಎಂಸಿ ಹಾಗೂ ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಅಡಕೆ ಖರೀದಿಸಲಾಗುತ್ತಿದೆ. ಹೊಸ ಅಡಕೆ ಕಿಂಟ್ವಾಲ್‌ಗೆ 25000 ರೂ, ಹಳೇ ಅಡಕೆಗೆ 27500 ರೂ.ಮಾರುಕಟ್ಟೆ ಧಾರಣೆ ಇದೆ. ಕಳ್ಳಮಾರ್ಗದ ಮೂಲಕ ಗ್ರಾಮೀಣ ಭಾಗದ ಕೆಲವು ಅಡಕೆ ವ್ಯಾಪಾರಿಗಳು ಬೆಳೆಗಾರರಿಂದ 20,000-21,000ರೂ.ಗೆ ಅಡಕೆ ಖರೀದಿ ಮಾಡುತ್ತಿದ್ದಾರೆ. ಬೆಳೆಗಾರರು ಜಾಗೃತರಾಗಬೇಕು ಎಂದು ಕ್ಯಾಂಪ್ಕೊ ಸಂಸ್ಥೆ ಸೂಚಿಸಿದೆ.

ಅಡಕೆ ಮಾರುಕಟ್ಟೆ ಬಗ್ಗೆ ಬೆಳೆಗಾರರಲ್ಲಿ ಗೊಂದಲ ಮೂಡಿಸುವ ಖಾಸಗಿ ವರ್ತಕರು, ಕಡಿಮೆ ಬೆಳೆಗೆ ಬೆಳೆಗಾರರಿಂದ ಅಡಕೆ ಖರೀದಿಸುವ ಜಾಲ ಸಕ್ರಿಯವಾಗಿದೆ. ಕ್ಯಾಂಪ್ಕೊ ನಿರಂತರವಾಗಿ ಅಡಕೆ ಬೆಳೆಗಾರರ ಹಿತ ಕಾಪಾಡಲು ಬದ್ಧ. ಕ್ಯಾಂಪ್ಕೋ ಖರೀದಿ ಕೇಂದ್ರ ವತಿಯಿಂದಲೇ ಉತ್ತಮ ಮಾರುಕಟ್ಟೆ ಧಾರಣೆಯಲ್ಲಿ ಅಡಕೆ ಖರಿದಿ ಮಾಡಲಾಗುತ್ತಿದೆ. -ಎಸ್.ಆರ್. ಸತೀಶ್ಚಂದ್ರ, ಕ್ಯಾಂಪ್ಕೊ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net