

- ಶ್ರವಣ್ ಕುಮಾರ್ ನಾಳ ಪುತ್ತೂರು
ಆಸಿಯಾನ್ ರಾಷ್ಟ್ರಗಳೊಂದಿಗಿನ ಆಮದು ಒಪ್ಪಂದವನ್ನು ಕೇಂದ್ರ ಸರ್ಕಾರ ಮರುಪರಿಶೀಲನೆ ನಡೆಸಲು ತೀರ್ಮಾನಿಸಿದ್ದು, ಕಳಪೆ ಅಡಕೆ ಆಮದು ಶಾಶ್ವತ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಹಾಗಾದಲ್ಲಿ ಭಾರತದ ಅಡಕೆ ಮಾರುಕಟ್ಟೆ ಪೂರ್ಣ ಪ್ರಮಾಣದಲ್ಲಿ ದೇಶೀಯ ಅಡಕೆಯ ನಿಯಂತ್ರಣಕ್ಕೆ ಸಿಗಬಹುದೆಂಬ ಮುನ್ಸೂಚನೆಯಿದೆ.
ದಕ್ಷಿಣ ಕೊರಿಯಾ, ಸಿಂಗಾಪುರ, ಮಲೇಷ್ಯಾ, ಥಾಯ್ಲೆಂಡ್, ಕಾಂಬೋಡಿಯಾದ ಕಡಿಮೆ ಗುಣಮಟ್ಟದ ಕಾಡುತ್ಪತ್ತಿ ಸಹಿತ ಅಡಕೆ ಯಥೇಚ್ಛ ಪ್ರಮಾಣದಲ್ಲಿ ಮಯನ್ಮಾರ್, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮೂಲಕ ಭಾರತ ಪ್ರವೇಶಿಸುತ್ತಿರುವುದರಿಂದ ಇಲ್ಲಿನ ಗುಣಮಟ್ಟದ ಅಡಕೆ ಬೇಡಿಕೆ ಕಳೆದುಕೊಂಡಿತ್ತು. ಆಸಿಯಾನ್ ಸಹಿತ ವಿವಿಧ ಒಪ್ಪಂದಗಳನ್ನು ಮುಂದಿಟ್ಟು ಹಲವು ರಾಷ್ಟ್ರಗಳು ಭಾರತಕ್ಕೆ ಕಳಪೆ ವಸ್ತುಗಳನ್ನು ರಫ್ತು ಮಾಡುತ್ತಿದ್ದು, ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಅಡಕೆಯೂ ಸೇರಿದೆ. ಕಠಿಣ ನಿಯಮಗಳ ಮೂಲಕ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ, ಮಾರುಕಟ್ಟೆ ಹಾಗೂ ಉತ್ಪಾದನೆಗಾಗಿ ಆತ್ಮನಿರ್ಭರ ಸಂಕಲ್ಪದೊಂದಿಗೆ ಹೊಸ ನೀತಿ ಜಾರಿಗೆ ಕೇಂದ್ರ ಪಣತೊಟ್ಟಿದೆ.
ಇದರ ಭಾಗವಾಗಿ ಆಸಿಯಾನ್ ರಾಷ್ಟ್ರಗಳಿಂದ ಭಾರತಕ್ಕೆ ಅಡಕೆ ಆಮದಿಗೆ ಶೇ.35ರಿಂದ 41ರವರೆಗೆ ತೆರಿಗೆ ವಿಧಿಸಲು ಭಾರತ ಸರ್ಕಾರ ನಿರ್ಧಾರ ಕೈಗೊಂಡಿದೆ. ಈಗ ಆಸಿಯಾನ್ ಒಪ್ಪಂದದಿಂದ ಭಾರತಕ್ಕೆ ಆಮದಾಗುವ ವಸ್ತು, ಗುಣಮಟ್ಟ ರಹಿತ ಉತ್ಪನ್ನಗಳ ಪಟ್ಟಿ ನೀಡುವಂತೆ ವಾಣಿಜ್ಯ ಸಚಿವಾಲಯಕ್ಕೆ ಸೂಚನೆ ಹೋಗಿದೆ.
ಶಾಶ್ವತ ಬಂದ್ ಸಾಧ್ಯತೆ ಹೆಚ್ಚು: ಬೇಡಿಕೆ ಇರುವಷ್ಟೇ ಅಡಕೆ ಸಹಿತ ಕಾಡುತ್ಪತ್ತಿ ವಸ್ತುಗಳ ಉತ್ಪಾದನೆ ಭಾರತದಲ್ಲಿದೆ. ಆದರೂ ಒಪ್ಪಂದಗಳಂತೆ ಆಮದು ನಡೆಯುತ್ತಿದೆ. ಸ್ಥಳೀಯ ಉತ್ಪನ್ನಗಳ ಬೇಡಿಕೆ ಕುಸಿಯದಂತೆ ತಡೆಯಲು ಬಹುತೇಕ ರಾಷ್ಟ್ರಗಳು ಇತರ ರಾಷ್ಟ್ರಗಳ ಕಳಪೆ ಉತ್ಪನ್ನಗಳನ್ನು ಕಪ್ಪುಪಟ್ಟಿಯಲ್ಲಿ ಸೇರಿಸುತ್ತಿವೆ. ಭಾರತ ಕೂಡ ಇದೇ ಹಾದಿಯಲ್ಲಿ ಕ್ರಮ ಕೈಗೊಂಡರೆ ಆಸಿಯಾನ್ ರಾಷ್ಟ್ರಗಳಿಂದ ಆಮದಾಗುವ ಅಡಕೆ ಸಹಿತ ಕಾಡುತ್ಪತ್ತಿ ವಸ್ತುಗಳು ಶೇ.100ರಷ್ಟು ಸ್ಥಗಿತಗೊಳ್ಳಲಿದೆ ಎಂದು ಕೃಷಿ ಮಾರುಕಟ್ಟೆ ತಜ್ಞ ಡಾ.ವ್ನಿೇಶ್ವರ ವರ್ಮುಡಿ ಹೇಳುತ್ತಾರೆ.
ವರವಾದ ನೇಪಾಳ ವಿವಾದ: ಕರಾವಳಿ ಅಡಕೆ (ಚಾಲಿ) ಕಂಡುಕೇಳರಿಯದ ಧಾರಣೆ ಪಡೆಯುತ್ತಿರುವುದರ ಹಿಂದೆ ನೇಪಾಳ ಗಡಿ ವಿವಾದದ ಪಾಲೂ ಇರುವುದು ಸ್ಪಷ್ಟವಾಗಿದೆ. ಮಳೆಗಾಲ ಹಾಗೂ ಚಳಿಗಾಲ ಸಂದರ್ಭ ಉತ್ತರ ಭಾರತದಿಂದ ಅಡಕೆಗೆ ಬೇಡಿಕೆ ಹೆಚ್ಚಾಗುವುದು ರೂಢಿ. ಈ ಬಾರಿ ಇಳುವರಿ ಕೊರತೆಯಿಂದಾಗಿ ಬೇಡಿಕೆ ತುಸು ಹೆಚ್ಚಾಗಿಯೇ ಇತ್ತು. ಬೇಡಿಕೆ ಸರಿಗಟ್ಟಲು ವರ್ತಕರು ಹೆಚ್ಚುವರಿ ಬೆಲೆ ನೀಡಿದರೂ ಬೆಳೆಗಾರರು ಮಾರುಕಟ್ಟೆಗೆ ಅಡಕೆ ಬಿಡುತ್ತಿಲ್ಲ. ಕರೊನಾ, ಆಮದು ನಿರ್ಬಂಧ ಕಾರಣಗಳಿಂದ ವಿದೇಶಗಳಿಂದ ಅಡಕೆ ಬರುವುದು ಕಡಿಮೆಯಾಗಿದೆ. ನೇಪಾಳ ಗಡಿ ಕ್ಯಾತೆ ಬಳಿಕ ಆ ದೇಶದ ಜತೆಗಿನ ಆಮದು-ರಫ್ತು ವಹಿವಾಟಿಗೂ ಏಟು ಬಿದ್ದಿದೆ. ಅಕ್ರಮವಾಗಿ ಭಾರತ ಪ್ರವೇಶಿಸುವ ಅಡಕೆ ಟ್ರಕ್‌ಗಳಿಗೂ ತಡೆಯಾಗಿದೆ. ಭಾರತ-ನೇಪಾಳ ಮುಕ್ತ ವ್ಯಾಪಾರ ಒಪ್ಪಂದ ದುರ್ಬಳಕೆಗೆ ಬ್ರೇಕ್ ಬಿದ್ದಿರುವುದು ಸ್ಥಳೀಯ ಬೆಳೆಗಾರರಿಗೆ ಲಾಭ ತಂದಿದೆ.
ಡಬ್ಲುೃಟಿಒ ನಿಯಮದಂತೆ ಆರೋಗ್ಯಕ್ಕೆ ಹಾನಿಯಾಗುವ ಮತ್ತು ಕಳಪೆ ಉತ್ಪನ್ನಗಳ ಆಮದು ನಿಷೇಧಿಸುವುದು ಆಯಾ ರಾಷ್ಟ್ರಗಳ ವಿವೇಚನೆಗೆ ಬಿಟ್ಟಿದ್ದು. ಆಸಿಯಾನ್ ರಾಷ್ಟ್ರಗಳಿಂದ ಭಾರತಕ್ಕೆ ಆಮದಾಗುವ ವಸ್ತುಗಳು ಆರೋಗ್ಯಕ್ಕೆ ಹಾನಿಕರ ಮತ್ತು ಕಳಪೆ ಎಂಬುದನ್ನು ನಿರೂಪಿಸಬೇಕಾಗುತ್ತದೆ. ಇದೇ ಆಧಾರದಲ್ಲಿ ಅಡಕೆ ಸಹಿತ ಕಾಡುತ್ಪತ್ತಿ ಆಮದು ಸ್ಥಗಿತಗೊಳಿಸಬಹುದು. - ಡಾ.ವಿಘ್ನೇಶ್ವರ ವರ್ಮುಡಿ, ಕೃಷಿ ಮಾರುಕಟ್ಟೆ ತಜ್ಞ