ಸ್ಥಿರತೆ ಕಾಯ್ದುಕೊಂಡ ಅಡಕೆ ಮಾರ್ಕೆಟ್

arecanut new
Published on

ಪುತ್ತೂರು: ಪ್ರತೀ ವರ್ಷ ಜನವರಿ 3ನೇ ವಾರದಿಂದ ಏರುಗತಿಯಲ್ಲಿ ಸಾಗಬೇಕಿದ್ದ ಅಡಕೆ ಮಾರುಕಟ್ಟೆ ಧಾರಣೆ ಈ ಬಾರಿ ಸ್ಥಿರತೆ ಕಾಯ್ದು ಕೊಂಡಿದೆ.

ಮಧ್ಯವರ್ತಿಗಳು ವರ್ಷಾರಂಭದಲ್ಲಿ ಇರಾಕ್-ಅಮೆರಿಕ ನಡುವನ ಆಂತರಿಕ ಕಲಹದಿಂದ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳ ಆರ್ಥಿಕತೆಗೆ ಹೊಡೆತ ಬಿದ್ದಿರುವುದನ್ನೇ ನೆಪವಾಗಿಸಿ ಅಡಕೆ ಮಾರುಕಟ್ಟೆಯಲ್ಲೂ ಧಾರಣೆ ಇಳಿಕೆಯಾಗುತ್ತಿದೆ ಎಂಬ ಗುಮಾನಿ ಹಬ್ಬಿಸಿದ್ದರು. ಆದರೆ, ಕರಾವಳಿಯ ಅಡಕೆ ಬೆಳಗಾರರನ್ನು ಭಯಗೊಳಿಸುವ ಈ ಪ್ರಯತ್ನ ಯಶಸ್ವಿಯಾಗಿಲ್ಲ. ಅತ್ತ ಏರಿಕೆಯೂ ಆಗದೆ, ಇತ್ತ ಇಳಿಕೆಯೂ ಆಗದೆ ಒಂದು ತಿಂಗಳಿನಿಂದ ಅಡಕೆ ಸ್ಥಿರ ಮಾರುಕಟ್ಟೆ ಹೊಂದಿದೆ. ಹೊಸ ಅಡಕೆ ಕೆ.ಜಿ.ಗೆ 145-252 ರೂ, ಹೊಸಅಡಕೆ (ಸಿಂಗಲ್ ಚೋಲ್) 285-298 ರೂ, ಹಳೇ ಅಡಕೆ(ಡಬಲ್ ಚೋಲ್) 300 ರೂ.ನಲ್ಲಿ ಸ್ಥಿರವಾಗಿದೆ.

ಸ್ಥಿರ ಮಾರುಕಟ್ಟೆಯೇ ಅನುಕೂಲ: ಸದ್ಯದ ಸ್ಥಿತಿಯಲ್ಲಿ ಅಡಕೆ ಮಾರುಕಟ್ಟೆ ಇಳಿಕೆಯಾಗದೆ ಸ್ಥಿರ ಮಾರುಕಟ್ಟೆಯಿದ್ದರೆ ಅನುಕೂಲ ಎಂಬುದು ಮಾರುಕಟ್ಟೆ ವಿಶ್ಲೇಷಕರ ಅನಿಸಿಕೆ. ಪ್ರಸ್ತುತ ಹೆಚ್ಚಿನ ಪ್ರಮಾಣದಲ್ಲಿ ಅಡಕೆ ಬರುತ್ತಿಲ್ಲ. ಅಡಕೆಗೆ ಬೆಲೆ ಏರಿಕೆಯಾಗುತ್ತದೆ ಎಂದು ಗೋದಾಮುಗಳಲ್ಲಿ ಅಡಕೆ ಶೇಖರಣೆ ಮಾಡುವ ದಳ್ಳಾಲಿಗಳ ತಂತ್ರವೇ ಸ್ಥಿರ ಮಾರುಕಟ್ಟೆಗೆ ಕಾರಣ. ಮಾರ್ಚ್ ಆರ್ಥಿಕ ವರ್ಷಾಂತ್ಯ. ಆದುದರಿಂದ ಅಡಕೆಯು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದರೂ, ಬೆಲೆ ಏರಿಕೆಯಾಗದಂತೆ ತಡೆಯುವುದು ದಳ್ಳಾಲಿಗಳ ತಂತ್ರ. ಆದರೆ ಎಪ್ರಿಲ್ ನಂತರ ಅಡಕೆ ಮಾರುಕಟ್ಟೆ ನಿರೀಕ್ಷೆಗಿಂತಲೂ ಹೆಚ್ಚಾಗಿ ಚೇತರಿಸಿಕೊಳ್ಳಲಿದೆ ಎಂದು ಮಾರುಕಟ್ಟೆ ತಜ್ಞ ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ವಿಜಯವಾಣಿಗೆ ತಿಳಿಸಿದ್ದಾರೆ.

ಜೂನ್ ವೇಳೆ 300-320ರೂ. ಗಡಿ ದಾಟುವ ನಿರೀಕ್ಷೆ: 2019ರ ಡಿ.ಎರಡನೇ ವಾರದವರೆಗೆ ಏರಿಕೆ ಕಂಡಿದ್ದ ಅಡಕೆ ಮಾರುಕಟ್ಟೆ ಡಿ.13ರಿಂದ 25ರವರೆಗೆ ಇಳಿಮುಖವಾಗಿದೆ. ವರ್ಷದ ಕೊನೆಯಲ್ಲಿ ಏರಿಕೆ ಕಂಡ ಅಡಕೆ ಮಾರುಕಟ್ಟೆ 2020ರ ಆರಂಭದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಮಾರುಕಟ್ಟೆಗೆ ಬೇಡಿಕೆಯಷ್ಟು ಅಡಕೆ ಪೂರೈಕೆಯಾಗದ ಕಾರಣ ಧಾರಣೆ ಏರುಮುಖವಾಗಿತ್ತು. ಈ ಬಾರಿ ಇಳುವರಿ ಕಡಿಮೆಯಾಗಿದ್ದು, ಅಡಕೆ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚು. ಹೀಗೆಯೇ ಮುಂದುವರಿದರೆ ಜೂನ್ ವೇಳೆ ಅಡಕೆ ಧಾರಣೆ 300-320ರೂ. ಗಡಿ ದಾಟುವ ನಿರೀಕ್ಷೆ ಇದೆ ಎಂಬುದು ಮಾರುಕಟ್ಟೆ ತಜ್ಞ ಅಭಿಪ್ರಾಯ.

ರಬ್ಬರ್, ತೆಂಗಿನಕಾಯಿ ದರ: ಎಪಿಎಂಸಿ ಹಾಗೂ ಪುತ್ತೂರು ಮಾರುಕಟ್ಟೆಯಲ್ಲಿ ಗುರುವಾರ ರಬ್ಬರ್ ಆರ್‌ಎಸ್‌ಎಸ್ 4- 132 ರೂ., ಆರ್‌ಎಸ್‌ಎಸ್ 5-124 ರೂ, ಲಾಟ್- 114 ರೂ., ಸ್ಕ್ರಾಪ್ 1- 81 ರೂ., ಸ್ಕ್ರಾಪ್ 2- 73 ರೂ.ನಲ್ಲಿ ವ್ಯವಹರಿಸಿದೆ. ತೆಂಗಿನಕಾಯಿ ಸಣ್ಣ ಗಾತ್ರ(ಕೆಜಿಗೆ) 20-24 ರೂ., ಮಧ್ಯಮ ಗಾತ್ರ 25-29 ರೂ., ದೊಡ್ಡ ಗಾತ್ರ 30-38 ರೂಪಾಯಿಯಲ್ಲಿ ಸ್ಥಿರವಾಗಿದೆ. ಕೊಬ್ಬರಿ 80-90 ರೂ. ಧಾರಣೆ ಇತ್ತು. ಕಾಳುಮೆಣಸು- 310-320 ರೂ, ಕೊಕೋ 53-55 ರೂ., ಕೊಬ್ಬರಿ 80- 90 ರೂ. ಧಾರಣೆ ಇತ್ತು.

ವಿದೇಶಿ ಅಡಕೆ ಭಾರತದ ಮಾರುಕಟ್ಟೆ ಪ್ರವೇಶಿಸದೇ ಇದ್ದರೆ ಮುಂದಿನ ಮಾರ್ಚ್ ನಂತರದ ತಿಂಗಳಲ್ಲಿ ಅಡಕೆ ಮಾರುಕಟ್ಟೆ ಧಾರಣೆಯಲ್ಲಿ ಏರಿಕೆಯಾಗುವುದರಲ್ಲಿ ಅನುಮಾನ ಇಲ್ಲ. ಸದ್ಯದ ಸ್ಥಿತಿಯಲ್ಲಿ ಅಡಕೆ ಮಾರುಕಟ್ಟೆ ಧಾರಣೆ ಇಳಿಕೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ. ಸತೀಶ್ಚಂದ್ರ ಎಸ್.ಆರ್. ಅಧ್ಯಕ್ಷ, ಕ್ಯಾಂಪ್ಕೊ

ಶ್ರವಣ್ ಕುಮಾರ್ ನಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net