

ಶೃಂಗೇರಿ: ಕುಟುಂಬ ನಿರ್ವಹಣೆಗೆ ಆಧಾರವಾದ ಅಡಕೆ ತೋಟಕ್ಕೆ ಕಾಡಿದ ಹಳದಿ ಎಲೆ ರೋಗ. ಪರ್ಯಾಯ ಬೆಳೆಗಳಿಂದಲೂ ಆಗುವ ಕಷ್ಟ-ನಷ್ಟಗಳ ಅರಿವು ಇರುವುದರಿಂದ ತಾಲೂಕಿನಲ್ಲಿ ಕೆಲವರು ಸ್ವಯಂ ಉದ್ಯೋಗದ ಕಡೆಗೆ ಒಲವು ತೋರುತ್ತಿದ್ದಾರೆ.
ಅಡ್ಡಗದ್ದೆ ಗ್ರಾಪಂ ವ್ಯಾಪ್ತಿಯ ಕೃಷಿಕ ಹೆಬ್ಬಿಗೆ ರಾಮಚಂದ್ರ ರಾವ್ ಕೂಡ ಇದಕ್ಕೆ ಹೊರತಾಗಿಲ್ಲ. ಇದ್ದ ನಾಲ್ಕು ಎಕರೆ ತೋಟಕ್ಕೆ ಹಳದಿ ಎಲೆ ರೋಗ ತಗುಲಿ ಇಳುವರಿ ಕಡಿಮೆಯಾಯಿತು. ಆಗ ಇವರು ಆಲೋಚಿಸಿದ್ದು ಸ್ವಯಂ ಉದ್ಯೋಗದ ಕಡೆಗೆ. ಆರ್ಥಿಕ ಸಬಲತೆಯ ಜತೆಗೆ ರೈತರಿಗೆ ಹಾಗೂ ಸಾರ್ವಜನಿಕರಿಗೂ ಉಪಯೋಗವಾಗಲಿ ಎಂಬ ಉದ್ದೇಶದಿಂದ ಕೊಬ್ಬರಿ ಹಾಗೂ ಶೇಂಗಾ ಎಣ್ಣೆ ಮಿಲ್, ಸಾವಯವ ಗೊಬ್ಬರ ಘಟಕ ಆರಂಭಿಸಿ ಯಶಸ್ವಿಯಾಗಿದ್ದಾರೆ.
1989ರಲ್ಲಿ ಆರಂಭಿಸಿದ ಸಾವಯವ ಗೊಬ್ಬರವನ್ನು ಜಿಲ್ಲೆಯಲ್ಲಷ್ಟೇ ಅಲ್ಲದೆ, ಶಿವಮೊಗ್ಗ, ಹೊಸನಗರ, ಸಾಗರ, ತೀರ್ಥಹಳ್ಳಿ ಮುಂತಾದೆಡೆ ವಿತರಿಸುತ್ತಿದ್ದಾರೆ. ಇವರು ಉತ್ಪಾದಿಸುವ ಸಾವಯವ ಗೊಬ್ಬರ ಶುಂಠಿ, ಕಾಫಿ, ಅಡಕೆ, ಕಾಳುಮೆಣಸು ಮುಂತಾದ ಬೆಳೆಗಳಿಗೆ ಹೆಚ್ಚು ಉಪಯುಕ್ತ ಎಂಬುದು ತಾಲೂಕಿನ ಹಲವು ರೈತರ ಅಭಿಮತ.
ಪರಿಶುದ್ಧ ಕೊಬ್ಬರಿ ಹಾಗೂ ಶೇಂಗಾ ಎಣ್ಣೆಯನ್ನು ಮಾರುಕಟ್ಟೆಗೆ ನೀಡಬೇಕು ಎಂಬ ಅವರ ತುಡಿತಕ್ಕೆ ಪ್ರೋತ್ಸಾಹ ನೀಡಿದವರು ತಂದೆ ಸಾಹಿತಿ ಚಂದ್ರಶೇಖರ್, ಪತ್ನಿ ಸುರೇಖಾ, ಮಗಳು ಸುಮೇಧಾ, ಮಗ ಆನಂದಕೃಷ್ಣ ಹೆಬ್ಬಾರ್.
ಇತ್ತೀಚೆಗೆ ಗುಜರಾತಿನಿಂದ ಎರಡು ಲಕ್ಷ ರೂ. ಮೌಲ್ಯದ ಯಂತ್ರವನ್ನು ಖರೀದಿಸಿ ಹೊಸ ಉದ್ಯಮಕ್ಕೆ ನಾಂದಿ ಹಾಡಿದ ಅವರು ತಿಪಟೂರು, ಅರಸೀಕೆರೆ ಮುಂತಾದೆಡೆಯಿಂದ ಆಯ್ದ ಕೊಬ್ಬರಿ ತಂದು ಪರಿಶುದ್ಧ ಕೊಬ್ಬರಿ ಎಣ್ಣೆ ತಯಾರಿಸುತ್ತಿದ್ದಾರೆ. ಜತೆಗೆ ಚಿತ್ರದುರ್ಗ, ಚನ್ನಗಿರಿ ಭಾಗದಿಂದ ಶೇಂಗಾ ಖರೀದಿಸಿ ಎಣ್ಣೆ ತಯಾರಿಸುತ್ತಿದ್ದಾರೆ. ಪ್ರತಿದಿನ 50 ಲೀ.ಗಿಂತ ಹೆಚ್ಚು ಅಡುಗೆ ಎಣ್ಣೆ ತಯಾರಿಸುತ್ತಾರೆ. ಒಂದು ಲೀ. ಕೊಬ್ಬರಿ ಎಣ್ಣೆ 280 ಹಾಗೂ ಶೇಂಗಾ ಎಣ್ಣೆ 375 ರೂ.ಗೆ ಮಾರಾಟವಾಗುತ್ತಿದೆ.
ತೋಟಕ್ಕೆ ಆವರಿಸಿದ ಅಡಕೆ ಹಳದಿ ಎಲೆರೋಗದಿಂದ ಧೃತಿಗೆಡದೆ ಉದ್ಯಮ ಸ್ಥಾಪಿಸಿ ಯಶಸ್ವಿಯಾದ ಇವರಿಗೆ ತಮ್ಮದೇ ಆದ ವೆಬ್ಸೈಟ್ ಮೂಲಕ ನೇರ ಮಾರುಕಟ್ಟೆ ಆರಂಭಿಸಿ ಗ್ರಾಹಕರಿಗೆ ತಲುಪಿಸುವ ಯೋಜನೆ ಇದೆ. ನಾಲ್ಕಾರು ಯುವಕರಿಗೆ ತಮ್ಮ ಉದ್ಯಮದಲ್ಲಿ ಕೆಲಸವನ್ನೂ ನೀಡಿದ್ದಾರೆ. ಮಾಹಿತಿಗೆ ಮೊ: 8088843190 ಸಂರ್ಪಸಬಹುದು.
ತೋಟ ನಿರ್ವಹಣೆ ಜತೆ ಮಲೆನಾಡಿನ ರೈತರು ಸ್ವಯಂ ಉದ್ಯೋಗದತ್ತ ಹೆಚ್ಚಿನ ಗಮನ ಹರಿಸಬೇಕು. ಇಲ್ಲಿನ ಯುವಕರು ನಗರದ ಕಡೆ ಹೋಗಿ ಅಲ್ಲಿನ ಕೆಲಸಕ್ಕೆ ಹಾಕುವ ಪರಿಶ್ರಮದಿಂದ ಅವರಿಗೆ ದೊರೆಯುವ ಸಂಬಳದಲ್ಲಿ ಉಳಿತಾಯ ಶೂನ್ಯ. ಇಲ್ಲಿನ ಯುವಜನತೆ ಹಿರಿಯರು ನೀಡಿದ ಜಮೀನಿನ ಜತೆ ತಮ್ಮೊಳಗಿನ ಸಾಮರ್ಥ್ಯವನ್ನು ಸ್ವಯಂಉದ್ಯೋಗ ಮಾಡುವತ್ತ ಬಳಸಿಕೊಳ್ಳಬೇಕು. ಮಲೆನಾಡಿನ ಉಪ್ಪಿನಕಾಯಿ, ಹಲಸಿನಹಪ್ಪಳ, ಮಾವಿನತೊಕ್ಕು, ಕಷಾಯ ಹುಡಿ, ಬಾಳೆಕಾಯಿ ಚಿಪ್ಸ್ಗಳಿಗೆ ನಗರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಒಂದಷ್ಟು ಜನರಿಗೂ ಉದ್ಯೋಗ ನೀಡಿ ಯುವಕರು ಯಶಸ್ವಿ ಉದ್ಯಮಿಯಾಗಲು ಇಲ್ಲಿ ಹೇರಳವಾದ ಅವಕಾಶವಿದೆ ಎನ್ನುತ್ತಾರೆ ಹೆಬ್ಬಿಗೆ ರಾಮಚಂದ್ರ ರಾವ್.
ದಾನಿಗಳ ನೆರವಿನಿಂದ ಸಮುದಾಯಕ್ಕೆ ಸೌಲಭ್ಯ: ಹೆಬ್ಬಿಗೆ ರಾಮಚಂದ್ರ ರಾವ್ ಅಡ್ಡಗದ್ದೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರೂ ಹೌದು. ಸರ್ಕಾರದ ಯಾವುದೇ ಅನುದಾನ ಪಡೆಯದೆ ದಾನಿಗಳ ನೆರವಿನೊಂದಿಗೆ ಜನಸಾಮಾನ್ಯರಿಗೆ ಮಾಡಿದ ಸೇವೆ ಸದಾ ನೆನೆಪಿನಲ್ಲಿ ಉಳಿಯುವಂಥದ್ದು. 220 ಮನೆಗಳಿಗೆ 200 ಲೀ. ಸಾಮರ್ಥ್ಯದ ನೀರಿನ ಡ್ರಂ, 30 ಅಡಕೆ ಬೆಳೆಗಾರರಿಗೆ ಅಡಕೆ ಬೇಯಿಸುವ ಅಸ್ತ್ರ ಒಲೆಗೆ ತಲಾ 3000 ರೂ. ಸಹಾಯಧನ, 20 ಮನೆಗಳಿಗೆ ಇನ್ಡೆಕ್ಸ್ ಸ್ಟೌ ವಿತರಣೆ, ಎಸ್ಸಿ-ಎಸ್ಟಿ ಸಮುದಾಯದ ಮನೆಯವರಿಗೆ ಸೋಲಾರ್ ಲ್ಯಾಟೀನ್ಗಳು ಕೊಡಿಸಿದ್ದಾರೆ. ಜತೆಗೆ ಕರ್ಣಾಟಕ ಬ್ಯಾಂಕಿನ ಆರ್ಥಿಕ ಸಹಕಾರದಿಂದ 220 ಮನೆಗೆ ಸೋಲಾರ್ ವಿದ್ಯುತ್ದೀಪ ಸೌಲಭ್ಯ ಕಲ್ಪಿಸಲು ನೆರವಾಗಿದ್ದಾರೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ತಾಲೂಕಿನ ಪುಟ್ಟ ಗ್ರಾಮ ಅಡ್ಡಗದ್ದೆಗೆ 2019ರ ಡಿಸೆಂಬರ್ನಲ್ಲಿ ಇಸ್ರೋ ವಿಜ್ಞಾನಿಗಳನ್ನು ಕರೆಸಿ ಎರಡು ದಿನಗಳ ಕಾಲ ಗ್ರಾಮೀಣ ಮಕ್ಕಳಿಗಾಗಿ ‘ಬಾನಂಗಳದಲ್ಲಿ ಭಾರತ’ ಎಂಬ ಕಾರ್ಯಕ್ರಮ ಏರ್ಪಡಿಸಿದ್ದರು. ಇಸ್ರೋದಿಂದ ಚಂದ್ರಯಾನದ ಮಾದರಿಯನ್ನು ತರಿಸಿ ಮಕ್ಕಳ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.