ಕೋಟ್ಯಂತರ ರೂ ಮೌಲ್ಯದ ಅಡಕೆ ಡಕಾಯಿತಿ ಮಾಡಿದ್ದವರು ಅಂದರ್

chitradurga
chitradurga
Published on

ಚಿತ್ರದುರ್ಗ: ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಕೋಟ್ಯಂತರ ರೂ.ಅಡಕೆ ಡಕಾಯಿತಿ ಪ್ರಕರಣವನ್ನು ಭೇದಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಂತರ್ ರಾಜ್ಯ ಕುಖ್ಯಾತ ಆರೋಪಿಗಳ ಪೈಕಿ ಮೂವರನ್ನು ಬಂಧಿಸಿ,ಅವರಿಂದ 1.20 ಕೋಟಿ ರೂ.ಮೌಲ್ಯದ 300 ಚೀಲ ಅಡಕೆ,ಒಂದು ಲಾರಿ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯದ ಪ್ರಮುಖ ಆರೋಪಿ ಸಹಿತ 9 ಜನರ ಪತ್ತೆಗೆ ಬಲೆ ಬೀಸಲಾಗಿದ್ದು, ಇನ್ನು 40 ಮೂಟೆ ಅಡಕೆಯನ್ನು ವಶಕ್ಕೆ ಪಡೆಯಬೇಕಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣ ವಿವರಿಸಿದ ಎಸ್ಪಿ.ಜಿ.ರಾಧಿಕಾ,ಭೀಮಸಮುದ್ರದ, ಶ್ರೀ ರಂಗನಾಥ ಟ್ರೇಡರ್ಸ್‌ನಿಂದ ಲೋಡ್ ಆಗಿದ್ದ 340 ಚೀಲ ಅಡಕೆಯನ್ನು ಕೂಡ್ಲಿಗಿ ಬಳಿ ಜನವರಿ 5ರಂದು ದುಷ್ಕರ್ಮಿಗಳು ಅಡ್ಡಗಟ್ಟಿ ಚಾಲಕ, ಲಾರಿ ಸಹಿತ ಅಡಕೆಯ ನ್ನು ಅಪಹರಿಸಿದ್ದರು.

ಕಣ್ಣಿಗೆ ಕಾರದ ಪುಡಿ ಎರಚಿ ಚಾಲಕನ ಮೇಲೆ ಹಲ್ಲೆ ಮಾಡಿ,ಕೈಕಾಲುಗಳನ್ನು ಕಟ್ಟಿ ಹಾಕಿ ಕಾರೊಂದರಲ್ಲಿ ಕೂರಿಸಿ ಚಾಲಕನನ್ನು ಹುಬ್ಬಳ್ಳಿ ಬಳಿ ಬಿಟ್ಟಿದ್ದರು ಹಾಗೂ ಮಂಡ್ಯದ ಬಳಿ ಲಾರಿ ಪತ್ತೆಯಾಗಿತ್ತು. ಈ ಸಂಬಂಧ ಮೊದಲಿಗೆ ಗ್ರಾಮಾಂತರ ಠಾಣೆಯಲ್ಲಿ ಜನವರಿ 7ರಂದು ಟ್ರಾನ್ಸ್‌ಪೋರ್ಟ್ ಮಾಲೀಕ ಚಂದ್ರಶೇಖರ್ ಸಿಂಗ್ ಎಂಬುವರು,ಲಾರಿ ಚಾಲಕ ಮತ್ತು ಮಾಲೀಕ ಭೂಪ್‌ಸಿಂಗ್ ವಿರುದ್ಧವೇ ಅಡಕೆ ಕಳವು ಪ್ರಕರಣವನ್ನು ದಾಖಲಿಸಿದ್ದರು.

ಆದರೆ, ತನಿಖೆ ನಡೆಸಿದಾಗ ಚಾಲಕ, ಲಾರಿ ಅಪಹರಣದೊಂದಿಗೆ ಕೋಟ್ಯಂತರ ರೂ.ಮೌಲ್ಯದ ಅಡಕೆ ಡಕಾಯಿತಿ ಆಗಿದ್ದು ಗೊತ್ತಾ ಯಿತು. ಇದಕ್ಕಾಗಿ ರಚಿಸಿದ್ದ ಪೊಲೀಸರ ವಿಶೇಷ ತಂಡ ಆರೋಪಿಗಳಾದ ರಿಜ್ವಾನ್,ಸಲ್ಮಾನ್ ಹಾಗೂ ಲಿಂಗರಾಜು ಎಂಬುವರನ್ನು ಬಂಧಿಸಿದೆ.

ಈ ತಂಡ ಪ್ರಕರಣದ ಪ್ರಮುಖ ಆರೋಪಿ ಅಶ್ರಫ್‌ಅಲಿನನ್ನು ಬಂಧಿಸಲೆಂದು ಚಿಕ್ಕಮಗಳೂರು ಜಿಲ್ಲೆ ಬಿಲ್ಲಹಳ್ಳಿಗೆ ತೆರಳಿದ್ದಾಗ ಅಲ್ಲಿ ಕೆಲವರು ಪೊಲೀಸರು ಮೇಲೆ ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಲ್ಲಿ ರಿಜ್ವಾನ್ ತಪ್ಪಿಸಿಕೊಂಡಿದ್ದ. ಆದರೆ ಆತನನ್ನು ಮತ್ತೆ ಬಂಧಿಸಲಾಗಿದೆ ಹಾಗೂ ಹಲ್ಲೆ ಪ್ರಕರಣವೂ ಪ್ರತ್ಯೇಕವಾಗಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net