ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

20adarshkdga2
Published on

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಮೊಟ್ಟಮೊದಲ ಬಾರಿಗೆ ಅರೆಭಾಷಿಕ ಗೌಡ ಜನಾಂಗದವರಿಗೆ ಆಯೋಜಿಸಿರುವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.


ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡರ ಕ್ರಿಕೆಟ್ ಸಂಭ್ರಮಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ನ ಅಂಡರ್ ೧೫ ಆಟಗಾರ್ತಿ ಜೈನೀರ ತಾನಿಷ್ಕಾ ಚಾಲನೆ ನೀಡಿದರು.


ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಡಗು ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾನಂದ್ ಮಾತನಾಡಿ, ಅರಂಭದಲ್ಲಿ ಗೌಡ ಜನಾಂಗ ಬಾಂದವರಿಗೆ ಟೆನ್ನಿಸ್ ಬಾಲ್ ಪಂದ್ಯಾಟ ಆಯೋಜಿಸಲಾಗುತ್ತಿತ್ತು. ಬದಲಾವಣೆಗಾಗಿ ಈ ಬಾರಿ ಯುವ ವೇದಿಕೆ ವತಿಯಿಂದ ಲೆದರ್ ಬಾಲ್ ಪಂದ್ಯಾಟ ಆಯೋಜಿಸಿರುವುದು ಸಂತೋಷ. ಇದು ನಿಲ್ಲದೇ ಮುಂದುವರಿಯಬೇಕು. ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಐಪಿಎಲ್ ಮಾದರಿಯಲ್ಲಿ ಆಡಿಸುವುದರಿಂದ ಪೈಪೋಟಿ ನಡೆಯುತ್ತದೆ ಎಂದ ಅವರು ಕ್ರೀಡಾಪಟುಗಳಿಗೆ ಶುಭಕೋರಿದರು.


ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಕೊಡಗಿನ ಜನತೆಗೆ ಉತ್ತೇಜನ ನೀಡುವ ಕಾರ್ಯಕ್ರಮ ಇದಾಗಿದೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಪ್ರತಿಯೊಬ್ಬರು ಹುರುಪಿನಿಂದ ಜನಾಂಗವನ್ನು ಬೆಳೆಸಬೇಕು ಎಂದರು.


ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಮಾತನಾಡಿ, ಈ ಮೊದಲು ಆಯೋಜಿಸುತ್ತಿದ್ದ ಟೆನ್ನಿಸ್ ಬಾಲ್ ಪಂದ್ಯದಿಂದ ತಮ್ಮ ಕುಟುಂಬಸ್ಥರು ತಿಳಿಯಲು ಸಹಕಾರಿಯಾಗಿದೆ. ಆದರೆ, ಪ್ರತಿಭೆಗಳನ್ನು ಗುರುತಿಸಲು ಲೆದರ್ ಬಾಲ್ ಅವಶ್ಯಕವಾಗಿದೆ. ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.


ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯದರ್ಶಿ ಪುದಿನರವರನ ರಿಷಿದ್ ಮಾದಯ್ಯ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net