

ಮಡಿಕೇರಿ:
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಡಿಕೇರಿ ತಾಲೂಕು ಚೆಯ್ಯಂಡಾಣೆ ಗ್ರಾಮದ ನರಿಯಂದಡ ಅಯ್ಯಪ್ಪ ಯುವಕ ಸಂಘ ಸಹಕಾರದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ’ ಭಾನುವಾರ (ನ. 10) ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಅರೆಭಾಷೆಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಅಂದು ಬೆಳಗ್ಗೆ 8.30 ಗಂಟೆಗೆ ಕಡಂಗ ಗಣಪತಿ ದೇವಸ್ಥಾನದ ಎದುರಿನಲ್ಲಿ ಮ್ಯಾರಥಾನ್‍ಗೆ ಚಾಲನೆ ನೀಡುವ ಮೂಲಕ ಉತ್ಸವ ಆರಂಭಗೊಳ್ಳಲಿದೆ. ಬೆಳಗ್ಗೆ 9.30 ಗಂಟೆಗೆ ಧ್ವಜಾರೋಹಣ ಮತ್ತು ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ನರಿಯಂದಡ ಗ್ರಾ.ಪಂ.ಅಧ್ಯಕ್ಷ ಪೆಮ್ಮಂಡ ಕೌಶಿ ಕಾವೇರಮ್ಮ, ನೌಕಾದಳದ ನಿವೃತ್ತ ಸೇನಾನಿ ಪುದಿಯಮನೆ ಕೃಷ್ಣ, ಯವಕಪಾಡಿ ನಿವೃತ್ತ ಶಿಕ್ಷಕ ಮಂಞಂಡ್ರ ರೇಖಾ ಉಲ್ಲಾಸ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ನಗರದ ಅಕಾಡೆಮಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ
ಮಾಹಿತಿ ನೀಡಿದರು.
ಅಂದು ಬೆಳಗ್ಗೆ 10 ಗಂಟೆಗೆ ವಿವಿಧ ಕ್ರೀಡಾಕೂಟ ಮತ್ತು ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ 1.30 ಕ್ಕೆ ಚೆಯ್ಯಂಡಾಣೆ ಮುಖ್ಯರಸ್ತೆಯಿಂದ ಶಾಲೆವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಆಕರ್ಷಕ ಹುಲಿವೇಷ ಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳ ಪ್ರದರ್ಶನ ಜರುಗಲಿದೆ.
ಮಧ್ಯಾಹ್ನ 2 ಗಂಟೆಗೆ ವಿಶೇಷ ಆಕರ್ಷಣೆಯ ಗಂಡಸರ ಹಗ್ಗಜಗ್ಗಾಟದ ಅಂತಿಮ ಪಂದ್ಯಾಟ ನಡೆಯಲಿದೆ. ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಅರೆಭಾಷೆ ಕುರಿತು ಉಪನ್ಯಾಸ, ಹಿರಿಯ ಸಾಧಕರಿಗೆ ಸನ್ಮಾನ, ಬಹುಮಾನಗಳ ವಿತರಣೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3.30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಾಧಕರನ್ನು ಸನ್ಮಾನಿಸಲಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಡಾ.ಮಂತರ್ ಗೌಡ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಬಹುಮಾನ ವಿತರಿಸಲಿದ್ದಾರೆ. ಮಡಿಕೇರಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ ಸಮಾರೋಪ ಕ ಭಾಷಣ ಮಾಡಲಿದ್ದಾರೆ. ಪಾರಣೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ಕುಶಾಲಪ್ಪ, ಚೆಯ್ಯಂಡಾಣೆ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಬೆಳಿಯಂಡ್ರ, ಮೈಸೂರು ಗೌಡ ಸಮಾಜದ ಮಾಜಿ ಅಧ್ಯಕ್ಷ ತೋಟಂಬೈಲು ಮನೋಹರ್, ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
‘ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ದಶವರ್ಷ ಸಂಭ್ರಮದ ಸ್ಮರಣಾರ್ಥ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅರೆಭಾಷಿಕರು ಇರುವ ಗಡಿಪ್ರದೇಶಗಳಲ್ಲಿ ಅರೆಭಾಷಿಕರ ಬಾಂಧವ್ಯವನ್ನು ವೃದ್ಧಿಸಿ ಅರೆಭಾಷೆಯನ್ನು ಮತ್ತಷ್ಟು ಬೆಳೆಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅರೆಭಾಷೆ ಗಡಿನಾಡ ಉತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚೆಯ್ಯಂಡಾಣೆ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಹರಿಪ್ರಸಾದ್ ಬೆಳಿಯಂಡ್ರ,ನರಿಯಂದಡ ಅಯ್ಯಪ್ಪ ಯುವಕ ಸಂಘದ ಗೌರವ ಅಧ್ಯಕ್ಷ ತೋಟಂಬೈಲು ಅನಂತಕುಮಾರ್, ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ವಿನೋದ್ ಮೂಡಗದ್ದೆ ಸುದ್ದಿಗೋಷ್ಠಿಯಲ್ಲಿ ಇದ್ದರು.