

ಮಡಿಕೇರಿ: ಅರೆಭಾಷೆಯ ಬೆಳವಣಿಗೆಯಲ್ಲಿ ಯುವ ಸಮುದಾಯಕ್ಕೆ ದೊಡ್ಡ ಜವಾಬ್ದಾರಿಯಿದೆ ಎಂದು ಮಡಿಕೇರಿ ತಾಲೂಕು ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಮಿಟ್ಟು ರಂಜಿತ್ ಹೇಳಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಎಲ್ಲಾ ಗೌಡ ಸಮಾಜಗಳ ಸಹಭಾಗಿತ್ವದಲ್ಲಿ ಮಡಿಕೇರಿಯ ಗೌಡ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಅರೆಭಾಷೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಅರೆಭಾಷೆಯನ್ನು ಪಾರದರ್ಶಕವಾಗಿ ಕಲಿಸುತ್ತಿದ್ದಾರೆ. ಭಾಷೆಯ ಬೆಳವಣಿಗೆಯಲ್ಲಿ ಯುವ ಸಮುದಾಯಕ್ಕೆ ದೊಡ್ಡ ಜವಾಬ್ದಾರಿ ಇದ್ದು, ಭಾಷೆಯ ಬಳಕೆ ಹೆಚ್ಚಾಗಬೇಕು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಅಪ್ಪಯ್ಯ ಗೌಡ, ರಾಮಯ್ಯ ಗೌಡ ಅವರೊಂದಿಗೆ ಕರ್ತು ಕುಡಿಯ, ಚೆತ್ತು ಕುಡಿಯ ಎಂಬವರು ಕೂಡ ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ಮಡಿಕೇರಿಯಲ್ಲಿ ಅವರ ಪ್ರತಿಮೆಗಳ ನಿರ್ಮಾಣಕ್ಕೆ ಪ್ರಯತ್ನ ನಡಿಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ವಿಧವೆಯರನ್ನು ಎಲ್ಲರಂತೆ ಸಮಾನರಾಗಿ ಕಾಣುವ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಬರಬೇಕು. ಯಾವುದೇ ಮೂಡನಂಬಿಕೆಗಳಿಗೆ ಕಿವಿಗೊಡದೆ ಗೌರವಯುತವಾಗಿ ನಡೆಸಿಕೊಳ್ಳಬೇಕು. ಒಕ್ಕೂಟದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಅರೆಭಾಷೆ ಸಂಸ್ಕೃತಿ, ಸಂಪ್ರದಾಯದ ಬೆಳವಣಿಗೆ ಶ್ರಮಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರೆಭಾಷೆ ಸಾಂಸ್ಕೃತಿಕ ಅಕಾಡೆಮಿ ಮಾಜಿ ಅಧ್ಯಕ್ಷ ತುಂತಜೆ ಗಣೇಶ್, ನಗರಸಭೆಯ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೆರ ಮನೋಹರ್ ಮಾದಪ್ಪ ಮತ್ತಿತರರು ಉಪಸ್ಥಿತರಿದ್ದರು.