

ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯ ಅಬ್ಬರದಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ರೈತರ ಜಮೀನುಗಳಿಗೆ ನೀರು ಹರಿದು ಬೆಳೆ ನಷ್ಟವಾಗಿದೆ. ಕೆಲ ಗ್ರಾಮಗಳಲ್ಲಿ ಗುಡಿಸಲು ಮನೆಗಳು ಕುಸಿದು ಬಿದ್ದಿವೆ. ರಹೀಂನಗರ, ಎಸ್‌ಆರ್ ರಸ್ತೆ, ಗಾಂಧಿನಗರ, ಅಂಬೇಡ್ಕರ್ ನಗರ, ಪಾವಗಡ ರಸ್ತೆ, ನಗರಂಗೆರೆ ಗ್ರಾಮಕ್ಕೆ ಹೋಗುವ ರೈಲ್ವೆ ಸೇತುವೆ ಕೆಳಭಾಗ ಕೆರೆಗಳಂತಾಗಿದೆ.
ಕೊರಲಕುಂಟೆ ಗ್ರಾಮದ ಲಕ್ಷ್ಮೀದೇವಿ ಅವರ ಮನೆ ಸೇರಿ, ನಗರದಲ್ಲಿ 23, ಕಸಬಾ ವ್ಯಾಪ್ತಿಯಲ್ಲಿ 20 ಮನೆಗಳು ಬಿದ್ದಿವೆ. ಇನ್ನು ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಗಂಜಿಕೇಂದ್ರ: ಚಳ್ಳಕೆರೆ ನಗರದ ವಾರ್ಡ್ 8ರ ರಹೀಂನಗರ ನಿವಾಸಿಗಳಿಗೆ ಮಳೆ ಬಂತೆಂದರೆ ಗಂಜಿಕೇಂದ್ರವೇ ಗತಿ ಅನಿಸುತ್ತದೆ. ರಾತ್ರಿ ಸುರಿದ ಮಳೆಗೆ ಅಜ್ಜನಗುಡಿ ಕೆರೆ ಭಾಗದಿಂದ ಹರಿದು ಬಂದ ನೀರಿನ ರಭಸಕ್ಕೆ ರಹೀಂನಗರ ಬೃಹತ್ ಹಳ್ಳ ತುಂಬಿ ಹರಿದ ಪರಿಣಾಮ ಸಮೀಪದ ತಗ್ಗು ಪ್ರದೇಶದಲ್ಲಿರುವ 50 ಮನೆಗಳು ಜಲಾವೃತಗೊಂಡಿವೆ. ಮನೆಯಲ್ಲಿದ್ದ ಬಟ್ಟೆ, ಧವಸ-ಧಾನ್ಯ, ಪಾತ್ರೆ-ಸಾಮಗ್ರಿಗಳು ಸಂಪೂರ್ಣ ನೀರು ಪಾಲಾಗಿವೆ. ಗುಡಿಸಲು ವಾಸಿಗಳು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ವೀರದಿಮ್ಮನಹಳ್ಳಿ: ತಾಲೂಕಿನ ವೀರದಿಮ್ಮನಹಳ್ಳಿ ಭಾಗದ ಬೋರಪ್ಪನಹಟ್ಟಿ, ಕರೆಕಲ್ ಕೆರೆ, ಗೊರಲಕಟ್ಟೆಯಿಂದ ರಹೀಂನಗರ ಸಂಪರ್ಕ ಇರುವ ರಸ್ತೆಗಳು ಮಳೆ ನೀರಿನಿಂದ ಸಂಪೂರ್ಣ ಹಾನಿಯಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಲಕ್ಷ್ಮೀಬಾಯಿ ಗುಂಡನಾಯ್ಕ, ಗೀತಾಬಾಯಿ ನಾಗರಾಜ, ಲಕ್ಷ್ಮೀಬಾಯಿ ಗೋವಿಂದನಾಯ್ಕ, ಲಕ್ಷ್ಮೀಬಾಯಿ ಪ್ರಶಾಂತ, ಚಂದ್ರನಾಯ್ಕ, ರಾಮನಾಯ್ಕ ಎಂಬುವರ ಮನೆಗಳು ಮಳೆಯ ರಭಸಕ್ಕೆ ಕುಸಿದು ಬಿದ್ದಿವೆ.
ಗ್ರಾಮದಲ್ಲಿ ಸರಿಯಾದ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಇಲ್ಲ ಎಂದು ತಾಲೂಕು ಮತ್ತು ಸ್ಥಳೀಯ ಪಂಚಾಯಿತಿ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಅಪಾಯದ ಸ್ಥಿತಿಯಲ್ಲಿ ಗ್ರಾಮಸ್ಥರು ಜೀವ ಉಳಿಸಿಕೊಳ್ಳಲು ಹೋರಾಟ ಮಾಡಬೇಕಿದೆ ಎಂದು ಗ್ರಾಪಂ ಸದಸ್ಯ ಜಗದೀಶನಾಯ್ಕ ಅಳಲು ತೋಡಿಕೊಂಡರು.
ಮಳೆಯ ಪ್ರಮಾಣ: ಬುಧವಾರ ರಾತ್ರಿ ಸುರಿದ ಮಳೆ ಚಳ್ಳಕೆರೆ ನಗರ ವ್ಯಾಪ್ತಿಯಲ್ಲಿ 67.4 ಎಂಎಂ, ಪರಶುರಾಂಪುರ 7.2, ತಳಕು 94.2, ನಾಯಕನಹಟ್ಟಿ 69.2, ದೇವರಮರಿಕುಂಟೆ 39.2 ಎಂಎಂ ಮಳೆಯಾಗಿದೆ.
ಭೇಟಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್, ರಹೀಂನಗರ, ಚಳ್ಳಕೆರಮ್ಮನ ದೇವಸ್ಥಾನ ಮುಂಭಾಗದ ಹಳ್ಳ, ಪಾವಗಡ ರಸ್ತೆ ಮಾರ್ಗದಲ್ಲಿ ತುಂಬಿ ಹರಿಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕರ ಸಮಸ್ಯೆಗಳ ಪಟ್ಟಿ ಮಾಡಿ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಹಸೀಲ್ದಾರ್ ರೆಹಾನ್ ಪಾಷಾ, ಪೌರಾಯುಕ್ತ ಜಗರೆಡ್ಡಿ ಅವರಿಗೆ ಸೂಚಿಸಿದರು.
ವಾರ್ಡ್‌ನಲ್ಲಿನ ಬೃಹತ್ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮತ್ತು ಸಿಮೆಂಟ್ ರಿಬೆಲ್ಟ್ ಮಾಡಲು ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಪತ್ರಿಕೆಯಲ್ಲಿ ವಾರ್ಡ್ ಸಮಸ್ಯೆ ಬಗ್ಗೆ ಗಂಭೀರ ವರದಿ ಮಾಡಲಾಗಿತ್ತು. ಯಾವುದೇ ಪ್ರಯೋಜನವಾಗಿಲ್ಲ. ಮಳೆಯಿಂದ ಮನೆ ಕಳೆದುಕೊಂಡಿರುವ ಕುಟುಂಬಗಳಿಗೆ ಸರ್ಕಾರಿ ಶಾಲೆಯಲ್ಲಿ ಗಂಜಿಕೇಂದ್ರ ತೆರೆಯಲು ನಗರಸಭೆಗೆ ಒತ್ತಾಯ ಮಾಡಲಾಗಿದೆ.ಸುಜಾತ ಪಾಲಯ್ಯ, ವಾರ್ಡ್ ಸದಸ್ಯೆ, ರಹೀಂನಗರ ಮುಂಗಾರಿನಲ್ಲಿ ಬಿತ್ತನೆ ಮಾಡಿರುವ ಶೇಂಗಾ, ತೊಗರಿ, ಸೂರ್ಯಕಾಂತಿ ಇತರ ಬೆಳೆಗಳು ಮಳೆಯ ಕೊರತೆಯಿಂದ ನಲುಗಿದ್ದವು. ತಡವಾಗಿ ಬಿತ್ತಿರುವ ಬೆಳೆಗಳಿಗೆ ತೇವಾಂಶವಾಗಿ ಇಳುವರಿ ಇಲ್ಲದಾಗಿದೆ. ಮಳೆಯ ವ್ಯತ್ಯಯದಿಂದ ಈ ವರ್ಷವೂ ರೈತರಿಗೆ ಬೆಳೆ ಕೈಗೆ ಸಿಗುತ್ತಿಲ್ಲ. ಕೂಡಲೇ ರೈತರಿಗೆ ಪರಿಹಾರದ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೊಳಿಸಲಿ.ಕೆ.ಪಿ.ಭೂತಯ್ಯ, ಉಪಾಧ್ಯಕ್ಷ, ರಾಜ್ಯ ರೈತ ಸಂಘ, ಚಳ್ಳಕೆರೆ ಮಳೆಗಾಲದಲ್ಲಿ ಉಂಟಾಗುವ ಅನಾಹುತಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ರಾಜ ಕಾಲುವೆಗಳ ಒತ್ತುವರಿಯ ಮೂಲ ತೆರವುಗೊಳಿಸಬೇಕು. ಗಂಭೀರ ಸಮಸ್ಯೆ ಎದುರಿಸುತ್ತಿರುವ ರಹೀಂನಗರ, ಗಾಂಧಿನಗರ, ಎಸ್‌ಆರ್ ರಸ್ತೆ ಮತ್ತು ಕಾಟಪ್ಪನಹಟ್ಟಿ ಭಾಗದ ದೊಡ್ಡ ಹಳ್ಳ ಅಭಿವೃದ್ಧಿಪಡಿಸುವ ಮೂಲಕ ಸಮಸ್ಯೆಗೆ ನಗರಸಭಾ ಆಡಳಿತ ಕ್ರಮ ವಹಿಸಬೇಕಿದೆ.ಕೆ.ಜಗದೀಶ್, ನಿರ್ದೇಶಕ, ಡಿಸಿಸಿ ಬ್ಯಾಂಕ್, ಚಳ್ಳಕೆರೆ ನಗರದಲ್ಲಿ ಕಾಲುವೆಗಳ ಸ್ವಚ್ಛತಾ ಕಾರ್ಯಕ್ಕೆ ಜೆಸಿಬಿಗಳ ಬಳಸಿ, ನೀರು ಹರಿದು ಹೋಗಲು ದಾರಿ ಮಾಡಲಾಗಿದೆ. ರಹೀಂನಗರ, ಕಾಟಪ್ಪನಹಟ್ಟಿ ಮಾರ್ಗವಾಗಿ ಹರಿಯುವ ದೊಡ್ಡ ಹಳ್ಳದಲ್ಲಿನ ಜಾಲಿ ತೆರವುಗೊಳಿಸಲಾಗಿತ್ತು. ರಾಜ ಕಾಲುವೆಗಳ ಒತ್ತುವರಿ ಮತ್ತು ಮಳೆ ನೀರು ಹರಿದು ಹೋಗಲು ಅಡ್ಡಿಪಡಿಸುವ ರೀತಿ ಕಟ್ಟಡ ಕಟ್ಟಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.ಎಚ್.ಜಿ.ಜಗರೆಡ್ಡಿ, ಪೌರಾಯುಕ್ತರು, ನಗರಸಭೆ, ಚಳ್ಳಕೆರೆ