ಪ್ರಜ್ವಲ್ ಅವರ ಕುಟುಂಬದವರ ಸಂಪರ್ಕದಲ್ಲಿ ಇಲ್ವೇ?

Siddaramaiah_0
ಸಿದ್ದರಾಮಯ್ಯ
Published on

ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರನ್ನು ವಿಚಾರಣೆಗೆ ಒಳಪಡಿಸಬೇಕು ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಿಎಂ ತಿರುಗೇಟು ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳಿವೆ. ಈ ವಿಚಾರದಿಂದ ಗಮನವನ್ನು ಬೇರೆಡೆ ಸೆಳೆಯಲು ಕುಮಾರಸ್ವಾಮಿ ಅವರು ಡಿಕೆಶಿ ಹೆಸರು ಪ್ರಸ್ತಾಪಿಸಿದ್ದಾರೆ. ಪ್ರಜ್ವಲ್ ರೇವಣ್ಣ ಅಪರಾಧಿ ಅಲ್ಲ, ಆರೋಪಿ ಅಂತ ಹೇಳಿದ್ದಾರೆ. ನಾನು ಕೂಡ ಆರೋಪಿ ಅಂತಲೇ ಹೇಳುತ್ತಿರುವುದು ಎಂದು ಕುಟುಕಿದರು.

ದೇವೇಗೌಡ ಹಾಗೂ ಅವರ ಮನೆಯವರಿಗೆ ಗೊತ್ತಿಲ್ಲದೇ ಪ್ರಜ್ವಲ್ ಮನೆಯಿಂದ ಹೋಗಿದ್ದಾನೆಯೇ? ಪ್ರಜ್ವಲ್ ಅವರ ಕುಟುಂಬದವರ ಸಂಪರ್ಕದಲ್ಲಿ ಇಲ್ವೇ? ಪ್ರಜ್ವಲ್ ಪರ ಚುನಾವಣಾ ಪ್ರಚಾರಕ್ಕೆ ಹೋದಾಗ ನನ್ನ ಮಗ ಎಂದು ಕುಮಾರಸ್ವಾಮಿ ಹೇಳಿದ್ದರು. ಆ ಹೇಳಿಕೆ ಅವರ ಸಂಪರ್ಕದಲ್ಲಿ ಇದ್ದ ಹಾಗೆ ಅಲ್ಲವೇ? ಪ್ರಜ್ವಲ್ ವಿಚಾರ ಅವರ ಕುಟುಂಬಕ್ಕೆ ಎಲ್ಲವೂ ಗೊತ್ತಿದೆ ಎಂದು ಹೇಳಿದರು.


ಎಸ್‌ಐಟಿ ತನಿಖೆ ತಾರ್ಕಿಕ ಅಂತ್ಯ ಪಡೆಯುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ನಮಗೆ ಎಸ್‌ಐಟಿ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಕುಮಾರಸ್ವಾಮಿ ಕಾಲದಲ್ಲಿ ಎಷ್ಟು ಪ್ರಕರಣಗಳನ್ನು ಎಸ್‌ಐಟಿಗೆ ವಹಿಸಿದ್ದಾರೆ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ. ಎಸ್‌ಐಟಿ ರಚನೆ ಮಾಡುವುದು ಪ್ರಕರಣದ ಬಗ್ಗೆ ಗಮನವನ್ನು ಕೇಂದ್ರೀಕರಿಸಲು ಎಂದು ಸಮರ್ಥಿಸಿಕೊಂಡರು.


ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡಲು ಪ್ರಧಾನಿ ಮೋದಿಗೆ ಎರಡು ಬಾರಿ ಪತ್ರ ಬರೆಯಲಾಗಿದೆ. ಆದರೆ, ಈವರೆಗೂ ಉತ್ತರ ಬಂದಿಲ್ಲ. ಪ್ರಧಾನಿ ಕಚೇರಿಗೆ ಪತ್ರ ಬರೆದರೆ ಉತ್ತರ ಬಂದೇ ಬರುತ್ತದೆ ಎನ್ನುವ ಅಭಿಪ್ರಾಯ ತಪ್ಪಾಗಿದೆ. ಸಿಎಂ ಖುದ್ದಾಗಿ ಪ್ರಧಾನಿಗೆ ಪತ್ರ ಬರೆದರೆ ಅಲ್ಲಿಂದ ಉತ್ತರ ಬರಬೇಕಿತ್ತು. ಆದರೆ, ಉತ್ತರ ಏಕೆ ಕೊಟ್ಟಿಲ್ಲ ಎಂಬುದನ್ನು ನೀವು(ಮಾಧ್ಯಮದವರು) ಅವರನ್ನೇ ಕೇಳಿ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net