ಕೃಷ್ಣೆಯ ಮಕ್ಕಳು ಅನಾಥರಾದಾರು ಜೋಕೆ ?

Krishna's children are orphans
S R PATIL
Published on

ಬಾಗಲಕೋಟೆ: ಉತ್ತರ ಕರ್ನಾಟಕ ನಮ್ಮ ಅಸ್ಮಿತೆ. ಇಲ್ಲಿನ ಸಮಸ್ಯೆಗಳ ಸ್ಪಂದನೆಯಿಂದ ನಾನು ಎಂದೂ ದೂರ ಸರಿಯಲ್ಲ. ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಮಲತಾಯಿ ಧೋರಣೆ, ಅಭಿವೃದ್ಧಿ ವಂಚಿತವಾಗುವ ಪ್ರಸಂಗಗಳಿಗೆ ಇವತ್ತಿಗೂ ಸ್ಪಂದಿಸುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದ್ದಾರೆ.

ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಉತ್ತರದ ವಿಚಾರವಾಗಿ ನಮ್ಮ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಬೇಕು. 4 ಟಿಎಂಸಿ ನೀರನ್ನು ಕಾವೇರಿ ಅಭಿವೃದ್ಧಿ ಪ್ರಾಧಿಕಾರ ತಮಿಳುನಾಡಿಗೆ ಬಿಟ್ಟಾಗ, ಇಡೀ ಬೆಂಗಳೂರಲ್ಲಿ ಎಷ್ಟೊಂದು ರಾದ್ಧಾಂತವಾಯಿತು. ಬೆಂಗಳೂರಿಗೆ ಬೆಂಕಿ ಹಚ್ಚುವಂತ ರೀತಿಯಲ್ಲಿ ಪ್ರಸಂಗ ನಡೆಯಿತು.

ಈಗ ಕೃಷ್ಣಾ ವಿಚಾರದಲ್ಲಿ ನಮಗೆ 130 ಟಿಎಂಸಿ ನೀರು ಹಂಚಿಕೆಯಾಗಿ ತೀರ್ಪು ಬಂದು 13 ವರ್ಷಗಳಾದವು. ಇದುವರೆಗೂ ನಾವು ನೀರು ಬಳಕೆ ಮಾಡದೆ ಆಂಧ್ರಕ್ಕೆ ಹೋಗುತ್ತಿದೆ. ಈ ಬಗ್ಗೆ ಎಲ್ಲಿಯಾದರೂ ಧ್ವನಿ ಎತ್ತಿದ್ದಾರಾ? ಲೆಕ್ಕಕ್ಕೆ 130 ಟಿಎಂಸಿ ಆಗಿದ್ದರೂ ಅನಧಿಕೃತವಾಗಿ ಅದು 200 ಟಿಎಂಸಿಗೂ ಅಧಿಕ ನೀರು ಆಂಧ್ರಕ್ಕೆ ಹೋಗುತ್ತಿದೆ. ಈ ಬಗ್ಗೆ ಉತ್ತರ ಕರ್ನಾಟಕದ ರಾಜಕಾರಣಿಗಳು ಒಟ್ಟಾಗಿ ಧ್ವನಿ ಎತ್ತಬೇಕು. ಹೀಗೆಯೇ ಮುಂದುವರಿದರೆ ನಾಳೆ ಕಾವೇರಿ ನೀರು ಕಡಿಮೆ ಆಗುತ್ತಿದೆ. ಕೃಷ್ಣೆಯ ನೀರು ತೆಲಗಿನವರಿಗೆ ಹೋಗುತ್ತಿದೆ. ಕೃಷ್ಣೆಯ ನೀರು ನಮಗೆ ಕೊಡಿ ಎಂದು ಕಾವೇರಿ ವ್ಯಾಪ್ತಿಯ ಕನ್ನಡಿಗರು ಕೇಳಿದರೆ ಆಗ ಕೃಷ್ಣೆಯ ಮಕ್ಕಳು ಅನಾಥರಾಗಬೇಕಾಗುತ್ತದೆ. ಈಗಲೇ ಈ ಬಗ್ಗೆ ಎಚ್ಚೆತ್ತುಕೊಂಡು ನಮ್ಮ ಪಾಲಿನ ಕೃಷ್ಣೆಯ ನೀರು ನಾವು ಬಳಕೆ ಮಾಡುವಂತಾಗಬೇಕು. ಆಂಧ್ರಕ್ಕೆ ಹರಿದು ಹೋಗುತ್ತಿರುವ ನಮ್ಮ ಪಾಲಿನ ನೀರು ನಾವು ಬಳಕೆ ಮಾಡುವಂತಾಗಬೇಕು ಎಂದು ಎಸ್.ಆರ್.ಪಾಟೀಲ ಅವರು ಕೃಷ್ಣಾ ತೀರದ ಜನರಿಗೆ ಮುಂದೆ ಬರಬಹುದಾದ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net