ಮೈಸೂರಿನಲ್ಲಿ 5 ಕಡೆ ಫ್ಲೈ ಓವರ್ ಅಗತ್ಯ ಇದೆಯೇ?

fly over
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಬೆಂಗಳೂರು ನಂತರ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ಬರೋಬ್ಬರಿ 5 ಕಡೆ ಫ್ಲೈ ಓವರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮೇಲ್ಸೇತುವೆ ನಿರ್ಮಾಣದ ಮೊರೆ ಹೋಗುತ್ತಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ರಿಂಗ್ ರೋಡ್ ಸಂಪರ್ಕಿಸುವ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ಹೆಚ್ಚು ಇದೆ. ಇದರಿಂದ ಸಿಗ್ನಲ್ ಬಳಿ ವಾಹನಗಳು ಸಾಲುಗಟ್ಟಿ ನಿಂತುಕೊಳ್ಳುತ್ತವೆ. ವಾರಾಂತ್ಯದಲ್ಲಂತೂ ಟ್ರಾಫಿಕ್ ಸಮಸ್ಯೆ ಹೇಳತೀರದಷ್ಟು ಇದೆ. ಈ ನಿಟ್ಟಿನಲ್ಲಿ ಇಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ. ಇದು ಸೂಕ್ತ ಮತ್ತು ಅಗತ್ಯವೂ ಆಗಿದೆ.

ಜತೆಗೆ, ರಿಂಗ್ ರೋಡ್ ಸಂಪರ್ಕಿಸುವ ತಿ.ನರಸೀಪುರ ರಸ್ತೆಯ ಜಂಕ್ಷನ್, ಬಂಡಿಪಾಳ್ಯ ಬಳಿಯ ನಂಜನಗೂಡು ಜಂಕ್ಷನ್, ಬೋಗಾದಿ ಜಂಕ್ಷನ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಇದಕ್ಕಾಗಿ ದೊಡ್ಡ ಮೊತ್ತದ ಹಣ ಬೇಕಾಗಿದೆ. ಆದರೆ ಇಷ್ಟು ಪ್ರಮಾಣದಲ್ಲಿ ಫ್ಲೈ ಓವರ್‌ಗಳ ಅಗತ್ಯ ಇದೆಯೋ, ಇಲ್ಲವೋ ಎಂಬ ಚರ್ಚೆಗಳು ನಡೆಯುತ್ತಿವೆ.

ಮೈಸೂರು ಬೆಂಗಳೂರಿನಷ್ಟು ಬೆಳೆದಿಲ್ಲ. ಸಾಂಸ್ಕೃತಿಕ ನಗರಿಗೆ ಪಾರಂಪರಿಕ ಮಹತ್ವವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಗರವನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸಬೇಕಿದೆ. ಆದ್ದರಿಂದ ಬೆಂಗಳೂರು ಮಾದರಿ ಮೈಸೂರಿಗೆ ಅಗತ್ಯವಿಲ್ಲ. ಪ್ಲೈ ಓವರ್ ನಿರ್ಮಾಣ ಸಂದರ್ಭದಲ್ಲಿ ಈ ಬಗ್ಗೆ ಯೋಚಿಸುವ ಅಗತ್ಯ ಇದೆ. ಇದಕ್ಕೆ ಖರ್ಚು ಮಾಡುವ ಹಣವನ್ನು ಅರಮನೆ ಸುತ್ತ ಮತ್ತು ಪ್ರಮುಖ ಸ್ಥಳಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಬಳಕೆ ಮಾಡಿಕೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಸಲಹೆಗೆ ರಾಜ್ಯ ಸರ್ಕಾರ ಮನ್ನಣೆ ಕೊಡಬೇಕಿದೆ. ಈ ವಿಷಯವಾಗಿ ‘ಲೌಡ್‌ಸ್ಪೀಕರ್’ನಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಅನುದಾನ ಕ್ರೋಡೀಕರಣ


ಮೈಸೂರು ತ್ವರಿತವಾಗಿ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ನಗರದಲ್ಲಿ 4-5 ಫ್ಲೈ ಓವರ್ ನಿರ್ಮಿಸಲಾಗುವುದು. ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಒಂದು ಫ್ಲೈ ಓವರ್ ಹಾಗೂ ಉಳಿದ ಕಡೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿಕೊಂಡು ಅನುದಾನವನ್ನು ಕ್ರೋಡೀಕರಣ ಮಾಡಲಾಗುವುದು.
ಬಿ.ಎಸ್.ಸುರೇಶ್
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ

ಸಂಚರಿಸುವ ವಾಹನಗಳ ಸರ್ವೇ

ಬೆಂಗಳೂರು- ಮೈಸೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯನ್ನು ನಿಖರವಾಗಿ ತಿಳಿದುಕೊಳ್ಳಲು ಸರ್ವೇ ಮಾಡಲಾಗುವುದು. ಇದರಲ್ಲಿ ಬೆಂಗಳೂರು ಕಡೆಯಿಂದ ಬಂದು ತಿ.ನರಸೀಪುರ, ಹುಣಸೂರು, ನಂಜನಗೂಡು ಕಡೆಗೆ ಹೋಗುವ ವಾಹನಗಳ ಸಂಖ್ಯೆ ಗೊತ್ತಾದರೆ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ರಸ್ತೆ ಹಾಗೂ ಸರ್ವೀಸ್ ರಸ್ತೆ ಕಲ್ಪಿಸಲು ಅನುಕೂಲವಾಗುತ್ತದೆ. ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮುಂದಿನ 20 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ರಸ್ತೆಗಳು, ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಬೇಕಿದೆ.
ಎಚ್.ಸಿ.ಮಹದೇವಪ್ಪ
ಜಿಲ್ಲಾ ಉಸ್ತುವಾರಿ ಸಚಿವ

ಒಂದು ಕಡೆ ಮಾಡಿದರೆ ಸಾಕು


ನಗರದಲ್ಲಿ ನಾಲ್ಕೈದು ಕಡೆ ಪ್ಲೈ ಓವರ್ ಅಗತ್ಯವಿಲ್ಲ. ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಒಂದು ಕಡೆ ಮಾಡಿದರೆ ಸಾಕು. ಫ್ಲೈ ಓವರ್‌ಗಿಂತ ಹಿನಕಲ್‌ನಲ್ಲಿ ನಿರ್ಮಿಸಿರುವಂತೆ ಗ್ರೇಟರ್ ಸಪರೇಟರ್ ಅನ್ನು ನಿರ್ಮಿಸಬೇಕು. ಇದು ಖರ್ಚು ಕಡಿಮೆ, ನಿರ್ವಹಣೆ ಸುಲಭ. ಬೋಗಾದಿ, ಬಂಡಿಪಾಳ್ಯ, ತಿ.ನರಸೀಪುರ ರಸ್ತೆ ಜಂಕ್ಷನ್‌ನಲ್ಲಿ ಈ ಪ್ರಯೋಗ ಮಾಡಬಹುದು.
ಸಾಗರ ಸುರೇಶ್, ಖಾಸಗಿ ಸಂಸ್ಥೆಯ ಉದ್ಯೋಗಿ

ಭವಿಷ್ಯದಲ್ಲಿ ಮತ್ತಷ್ಟು ಸಮಸ್ಯೆ


ಈಗಾಗಲೇ ಮೈಸೂರಿನಲ್ಲಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಆದ್ದರಿಂದ ಮೇಲ್ಸೇತುವೆ ನಿರ್ಮಿಸಿದರೆ ಈ ಸಮಸ್ಯೆ ನಿವಾರಣೆಯಾಗಲಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರಿಗೂ ಅನುಕೂಲವಾಗಲಿದೆ.
ಎಂ. ಜಯಶಂಕರ್, ಅಧ್ಯಕ್ಷ, ಸ್ಪಂದನ ಸಂಸ್ಥೆ

ಬಂಡಿಪಾಳ್ಯದ ಬಳಿ ಅಗತ್ಯ


ರಿಂಗ್‌ರೋಡ್ ಮತ್ತು ನಂಜನಗೂಡು ರಸ್ತೆ ಸಂಪರ್ಕಿಸುವ ಬಂಡಿಪಾಳ್ಯದ ಬಳಿ ಮೇಲ್ಸೇತುವೆ ನಿರ್ಮಿಸುವ ಅಗತ್ಯ ಇದೆ. ಎಪಿಎಂಸಿ, ಕೇರಳಕ್ಕೆ ಹೋಗುವ ವಾಹನಗಳು ಹಾಗೂ ಪ್ರವಾಸಿಗರ ವಾಹನಗಳ ಸಂಖ್ಯೆ ಹೆಚ್ಚು. ಅಲ್ಲದೆ, ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಆದ್ದರಿಂದ ಇಲ್ಲಿ ಪ್ಲೈ ಓವರ್ ನಿರ್ಮಾಣ ಮಾಡಿದರೆ ವಾಹನ ಸಂಚಾರ ಸುಗಮವಾಗಲಿದೆ.
ಸಯ್ಯದ್ ಮಹದೇವಪುರ, ಸಾರ್ವಜನಿಕ


ಸದ್ಯಕ್ಕೆ ಮೈಸೂರಿಗೆ ಅಗತ್ಯವಿಲ್ಲ


ಸದ್ಯಕ್ಕೆ ಮೈಸೂರಿಗೆ ಫ್ಲೈ ಓವರ್ ಅಗತ್ಯವಿಲ್ಲ. ಇಂತಹ ಬೃಹತ್ ಕಾಮಗಾರಿಯಿಂದ ಮೈಸೂರಿನ ಹೆಗ್ಗುರುತಾದ ಪಾರಂಪರಿಕ, ಸಾಂಸ್ಕೃತಿಕ ಹಿರಿಮೆಗೆ ಧಕ್ಕೆಯಾಗಲಿದೆ. ಇಲ್ಲಿನ ಸ್ವಚ್ಛ ಪರಿಸರ ಹಾಳಾಗಲಿದೆ. ಅಭಿವೃದ್ಧಿ ಬೇಕು. ಆದರೆ ಅದನ್ನು ಎಷ್ಟು ಬೇಕೋ ಅಷ್ಟನ್ನೇ ಮಾಡಿ. ಬೇರೆ ಉದ್ದೇಶವನ್ನು ಇಟ್ಟುಕೊಂಡು ಅಭಿವೃದ್ಧಿ ಮಾಡಲು ಹೋಗಬೇಡಿ.
ಎ.ವಿ.ಕಾರ್ತಿಕ್, ಸಾರ್ವಜನಿಕ

ವಾಹನ ದಟ್ಟಣೆ ತಪ್ಪಿಸಿ


ವಾರಾಂತ್ಯ, ರಜಾ ದಿನಗಳಲ್ಲಿ ಅರಮನೆ ಸುತ್ತಲು ಹೆಚ್ಚಿನ ಪ್ರಮಾಣದಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ಇದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೆಂಗಳೂರಿನಂತೆ ಮೈಸೂರಿನಲ್ಲೂ ವಾಹನ ದಟ್ಟಣೆಯಿಂದ ಕಿರಿಕಿರಿಯಾಗುತ್ತಿದೆ. ಮೊದಲು ಈ ಸಮಸ್ಯೆ ಬಗೆಹರಿಸಲು ಗಮನ ಹರಿಸಬೇಕು.
ಎಸ್.ಶಾಲಿನಿ, ಗೃಹಿಣಿ, ಹಿನಕಲ್

ಅಪಘಾತ ವಲಯ ಗುರುತಿಸಿ


ನಗರದಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ನಗರ ವ್ಯಾಪ್ತಿಯ ರಿಂಗ್‌ರೋಡ್, ನಗರ, ಪಟ್ಟಣ, ಹೆದ್ದಾರಿಗಳಲ್ಲಿ ನಿತ್ಯ ಒಂದಿಲ್ಲೊಂದು ಕಡೆ ಅಪಘಾತ ಸಂಭವಿಸಿ ಸಾವು-ನೋವುಗಳು ಆಗುತ್ತಿವೆ. ಆದ್ದರಿಂದ ಇದನ್ನು ತಡೆಯಲು ಕ್ರಮ ವಹಿಸಬೇಕಿದೆ. ಅಪಘಾತ ವಲಯವನ್ನು ಗುರುತಿಸಿ ರಸ್ತೆ ಕಾಮಗಾರಿಯಲ್ಲಿನ ದೋಷವನ್ನು ಸರಿಪಡಿಸಬೇಕು. ವಾಹನ ಸವಾರರಿಗೆ ಅರಿವು ಮೂಡಿಸಲು ಕ್ರಮ ವಹಿಸಬೇಕು.
ಬಿ.ಬ್ರಿಜೇಶ್, ಸ್ವಯಂ ಉದ್ಯೋಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net