ಆರ್ಡಿ ಸರ್ಕಾರಿ ಪ್ರೌಢಶಾಲೆಗೆ ಮತ್ತೊಮ್ಮೆ ಪ್ರಶಸ್ತಿ ಗ್ಯಾಸ್ ಸೇವಿಂಗ್ ಕಿಟ್‌ಗೆ ರಾಷ್ಟ್ರೀಯ ಮನ್ನಣೆ

kit web
Published on

ಕುಂದಾಪುರ: ತಾಲೂಕಿನ ಅಲ್ಬಾಡಿ ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರಾದ ಅನುಷಾ ಮತ್ತು ರಕ್ಷಿತಾ ನಾಯ್ಕ ಅಭಿವೃದ್ಧಿಪಡಿಸಿ ಮಂಡಿಸಿದ ಗ್ಯಾಸ್ ಸೇವಿಂಗ್ ಕಿಟ್(ಜಿಎಸ್‌ಕೆ)ಗೆ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಮೂರನೇ ಬಾರಿ ಈ ಶಾಲೆ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿದೆ.

ಏಕೈಕ ಸರ್ಕಾರಿ ಶಾಲೆ: ಭಾರತ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ರಾಷ್ಟ್ರ ಮಟ್ಟದ ಸಿಎಸ್‌ಐಆರ್ (ಸಿಎಸ್‌ಈಆರ್ ಇನ್ನೋವೇಶನ್ ಅವಾರ್ಡ್ ಫೊರ್ ಸ್ಕೂಲ್ ಚಿಲ್ಡ್ರನ್) ಸ್ಪರ್ಧೆ ನಡೆಸಿತ್ತು. ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಸಲ್ಲಿಸಲಾದ ಅರ್ಜಿಗಳಲ್ಲಿ, ಕೊನೆಯ ಹಂತಕ್ಕೆ ಆಯ್ಕೆಯಾದ 14 ಶಾಲೆಗಳ ಪೈಕಿ ಅಲ್ಬಾಡಿ ಆರ್ಡಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯೂ ಸೇರಿದೆ. ವಿಜೇತ ಶಾಲೆಗಳ ಪಟ್ಟಿಯಲ್ಲಿ ಆಯ್ಕೆಯಾದ ಈ ಶಾಲೆ ದೇಶದ ಏಕೈಕ ಸರ್ಕಾರಿ ಶಿಕ್ಷಣ ಸಂಸ್ಥೆ ಎನ್ನುವುದು ವಿಶೇಷ. ಉಳಿದ ಎಲ್ಲವೂ ಖಾಸಗಿ ಶಾಲೆಗಳು. ರಾಜ್ಯದಿಂದ ಆಯ್ಕೆಯಾದ ಏಕೈಕ ಶಾಲೆಯೂ ಹೌದು.

ಸೆ.26ರಂದು ಪ್ರಶಸ್ತಿ ಪ್ರದಾನ: ಸೆ.26ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಕರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲು ಸಾಧ್ಯವಾಗದಿದ್ದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವಾಲಯ ಪ್ರಕಟಣೆ ತಿಳಿಸಿದೆ.

ಏನಿದು ಗ್ಯಾಸ್ ಕಿಟ್?

ಗ್ಯಾಸ್ ಸೇವಿಂಗ್ ಕಿಟ್ ಉಪಕರಣ ಗ್ಯಾಸ್ ಸ್ಟೌಗೆ ಅಳವಡಿಸಿದರೆ ಒಲೆಯ ಮೇಲೆ ಅಡುಗೆ ಆಗುತ್ತಿರುವಾಗಲೇ ಇಡೀ ಕುಟುಂಬದ ಸ್ನಾನಕ್ಕೆ ಬೇಕಾಗುವಷ್ಟು ಬಿಸಿ ನೀರು ಸಿಗುತ್ತದೆ. ಪ್ರಪಂಚದಾದ್ಯಂತ ಇದನ್ನು ಎಲ್ಲ ಮನೆ, ಹೋಟೆಲ್‌ಗಳಲ್ಲಿ ಬಳಸಿದರೆ, ದಿನಕ್ಕೆ ಲಕ್ಷಗಟ್ಟಲೆ ಟನ್ ಎಲ್‌ಪಿಜಿ ಉಳಿತಾಯವಾಗುತ್ತದೆ ಎಂಬುದನ್ನು ಈ ವಿದ್ಯಾರ್ಥಿನಿಯರು ಲೆಕ್ಕ ಮಾಡಿ ತೋರಿಸುತ್ತಾರೆ. 600 ರೂ.ಆಸುಪಾಸಿನಲ್ಲಿ ಈ ಕಿಟ್ ಸಿದ್ಧಪಡಿಸಲು ಸಾಧ್ಯ. ಕಿಟ್ ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕೆ ಪೇಟೆಂಟ್ ಪಡೆಯಲು ತಯಾರಿ ನಡೆದಿದೆ.

ಕಾರ್ಯನಿರ್ವಹಣೆ ಹೇಗೆ?

ಗ್ರಾಮೀಣ ಭಾಗದಲ್ಲೂ ಗ್ಯಾಸ್ ಉಳಿತಾಯ ಸಾಧ್ಯ ಎನ್ನುವ ಯೋಚನೆಯೇ ವಿದ್ಯಾರ್ಥಿನಿಯರ ಹೊಸ ಆವಿಷ್ಕಾರಕ್ಕೆ ಕಾರಣ. ಕಾಪರ್ ಕಾಯಿಲ್ ಫ್ರೇಮ್ ಮಾಡಿ ಸುರುಳಿ ಆಕಾರದಲ್ಲಿ ನಾಲ್ಕಾರು ಸುತ್ತು ಬರುವಂತೆ ಮಾಡಿ, ಗ್ಯಾಸ್ ಸ್ಟೌಗೆ ಕೂರಿಸಲಾಗುತ್ತದೆ. ಒಂದು ಕಾಪರ್ ಪೈಪ್ ತುದಿಗೆ ಟ್ಯಾಪ್ ಫಿಟ್ ಮಾಡಿ, ನೀರು ಬರುವಂತೆ ಮಾಡಿ ಟ್ಯಾಪ್ ಮೂಲಕ ಬಂದ ನೀರು ಬೆಂಕಿಯ ಸುತ್ತಿ ಮತ್ತೊಂದು ತುದಿಯಿಂದ ಪಾತ್ರೆಗೆ ಬರುತ್ತದೆ. ಕಾಫಿ, ಅನ್ನ ಬೇಯಿಸುವ ಸಂದರ್ಭ ನಲ್ಲಿ ಮೂಲಕ ನೀರು ಹರಿಸಿದರೆ ಬಿಸಿ ನೀರು ಸಿಗುತ್ತಿದ್ದು, ಸ್ನಾನ ಇನ್ನಿತರ ಬಳಕೆಗೆ ಬಳಸಬಹುದು. ಶಾಲೆಯಲ್ಲಿ ಈ ಗ್ಯಾಸ್ ಉಳಿತಾಯ ಕಿಟ್ ಅಳವಡಿಸಿಕೊಳ್ಳಲಾಗಿದೆ.

ಕಿಟ್ ಹಿಂದೆ ಶಿಕ್ಷಕರ ಶಕ್ತಿ

ಕಿಟ್ ಸಿದ್ಧಪಡಿಸಲು ವಿದ್ಯಾರ್ಥಿಯರ ಬೆನ್ನಿಗೆ ಶಾಲಾ ಶಿಕ್ಷಕ ವರ್ಗ ನಿಂತಿದೆ. ಶಾಲೆ ವಿಜ್ಞಾನ ಶಿಕ್ಷಕಿ ವೈಶಾಲಿ ರಾವ್ ಮಾರ್ಗದರ್ಶನದಲ್ಲಿ ಜಿಎಸ್‌ಕೆ ಕಿಟ್ ಸಿದ್ಧಪಡಿಸಲಾಗಿತ್ತು. ಮುಖ್ಯಶಿಕ್ಷಕ ಶೇಖರ್ ಶೆಟ್ಟಿಗಾರ್ ನೇತೃತ್ವದಲ್ಲಿ ಕಿಟ್ ಅಗತ್ಯ ವಸ್ತುಗಳ ಆಯ್ಕೆ ಹಾಗೂ ಸಂಗ್ರಹ ಆಂಗ್ಲ ಶಿಕ್ಷಕ ಶ್ರೀಕಾಂತ್ ನಾಯಕ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಪ್ರೇಮನಾಥ್ ತೋಳಾರ್, ಹಿಂದಿ ಶಿಕ್ಷಕ ಉದಯ್ ಶೆಟ್ಟಿ, ಕನ್ನಡ ಶಿಕ್ಷಕಿ ಮಾಲತಿ, ಸಮಾಜವಿಜ್ಞಾನ ಶಿಕ್ಷಕಿ ಮಾಲಿನಿ ಕೆ.ಆರ್, ಬೋಧಕೇತರ ಸಿಬ್ಬಂದಿ ಜ್ಯೋತ್ಸ್ನಾ, ಉಪಕರಣದ ವೈಜ್ಞಾನಿಕ ಆಯಾಮ ಗಣಿತ ಶಿಕ್ಷಕ ರಮೇಶ್ ಹಾಗೂ ಸುಮಲತಾ, ಜಿ.ಎಸ್.ಕೆ. ಕಿಟ್ ವಿನ್ಯಾಸ ಹಾಗೂ ವೆಲ್ಡಿಂಗ್ ಸಮಾಜ ವಿಜ್ಞಾನ ಶಿಕ್ಷಕ ಸುರೇಶ್ ಮರಕಾಲ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net