ಅರ್ಧಕ್ಕೆ ಕಾಮಗಾರಿ ನಿಲ್ಲಿಸಿ ನಾಪತ್ತೆಯಾಗಿರುವ ಕೆಆರ್‌ಐಡಿಎಲ್ ಅಧಿಕಾರಿಗಳು

7-cpt-1p
Published on

ಚನ್ನಪಟ್ಟಣ: ಅರ್ಧಕ್ಕೆ ಕಾಮಗಾರಿ ನಿಲ್ಲಿಸಿ ಕಣ್ಮರೆಯಾಗಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಕ್ರಮ ಸ್ಥಳೀಯ ನಿವಾಸಿಗಳಿಗೆ ಹಾಗೂ ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ.

ನಗರದ ಡ್ಯೂಂ ಲೈಟ್ ಸರ್ಕಲ್‌ನಿಂದ ಅಖಿಲ್‌ಷಾ ದರ್ಗಾದ ಮೂಲಕ ಬೆಂ-ಮೈ ಹೆದ್ದಾರಿವರೆಗೆ ಸಿಮೆಂಟ್ ರಸ್ತೆ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಯನ್ನು 2 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೆಆರ್‌ಐಡಿಎಲ್ ಮೂಲಕ ಒಂದು ವರ್ಷದ ಹಿಂದೆ ಆರಂಭಿಸಲಾಯಿತು. ಪ್ರಾರಂಭದಿಂದಲೂ ತೆವಳುತ್ತ ಸಾಗಿದ್ದ ಕಾಮಗಾರಿ ಇದೀಗ ಸಂಪೂರ್ಣ ನಿಂತು ಹೋಗಿದೆ. ಅರ್ಧಂಬರ್ಧ ಕಾಮಗಾರಿ ಇದೀಗ ಸಮಸ್ಯೆಯಾಗಿದೆ.

ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಈ ರಸ್ತೆಯಲ್ಲಿ ಪ್ರಸಿದ್ಧ ಅಖಿಲ್‌ಷಾ ದರ್ಗಾ ಸೇರಿ ಶಾಲೆ, ವಾಣಿಜ್ಯ ಮಳಿಗೆಗಳು, ಆಸ್ಪತ್ರೆ, ಎಪಿಎಂಸಿ, ಸುಗ್ರೀವಾಂಜನೇಯ ದೇವಾಲಯ ಹೀಗೆ ಹತ್ತು ಹಲವು ಜನನಿಬಿಡ ಸ್ಥಳಗಳಿಂದ ಕೂಡಿದೆ. ಈ ರಸ್ತೆಯ ನಿವಾಸಿಗಳು, ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ಮಂದಿಗೆ ಅಪೂರ್ಣ ಕಾಮಗಾರಿಯಿಂದಾಗಿ ಸಮಸ್ಯೆಯಾಗಿದೆ.

ಅವೈಜ್ಞಾನಿಕ ಚರಂಡಿ ಕಾಮಗಾರಿ: ಸುಗ್ರೀವಾಂಜನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ಪ್ರಾರಂಭಿಸಿರುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ಕಟ್ಟಿಕೊಂಡು ದುರ್ನಾತ ಬೀರುತ್ತಿದೆ. ಅಕ್ಕಪಕ್ಕದ ಅಂಗಡಿಗಳ ಮಾಲೀಕರು ಮೂಗುಮುಚ್ಚಿ ಕೂರುವಂತಾಗಿದೆ. ರಸ್ತೆ ವಿಸ್ತರಣೆಗಾಗಿ ಎರಡೂ ಬದಿಯಲ್ಲಿ ಅಗೆದು ಹಾಗೇ ಬಿಟ್ಟಿರುವ ಪರಿಣಾಮ ವಯೋವೃದ್ಧರು, ಮಕ್ಕಳು ತಿರುಗಾಡಲಾಗದಂತಾಗಿದೆ. ಇತ್ತೀಚಿಗೆ ಅಂಧರೊಬ್ಬರು ಬಿದ್ದು ಸೊಂಟ ಮುರಿದುಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾರ್ವಜನಿಕರ ಆಕ್ರೋಶ: ಬೇಕಾಬಿಟ್ಟಿ ಕಾಮಗಾರಿ ನಡೆಸುವ ಮೂಲಕ ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿರುವ ಕೆಆರ್‌ಐಡಿಎಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರಸ್ತೆ ಅಗೆದು ಕಾಮಗಾರಿ ಮುಂದುವರಿಸದೆ ಬಿಟ್ಟಿರುವ ಪರಿಣಾಮ ವ್ಯಾಪಾರದಲ್ಲಿ ನಷ್ಟ ಅನುಭವಿಸುವಂತಾಗಿದೆ. ವೃದ್ಧರು, ಮಕ್ಕಳು ರಸ್ತೆಯಲ್ಲಿ ಸಂಚರಿಸಲಾಗದೆ ಪರದಾಡುವಂತಾಗಿದೆ ಎಂದು ಕೆಆರ್‌ಐಡಿಎಲ್ ಅಧಿಕಾರಿಗಳ ವಿರುದ್ಧ ಎಂ.ಜಿ. ರಸ್ತೆಯ ವರ್ತಕರು, ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಾಮಗಾರಿಯನ್ನು ಪೂರ್ಣ ಗೊಳಿಸಬೇಕು. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪೌರಾಯುಕ್ತರ ಅಸಹಾಯಕತೆ: ಕಾಮಗಾರಿ ನಿರ್ವಹಣೆ ಹೊಣೆ ಹೊತ್ತಿರುವ ಕೆಆರ್‌ಐಡಿಎಲ್ ಅಧಿಕಾರಿಗಳು ಸ್ಥಳೀಯ ಜನರಿಗಿರಲಿ ನಗರಸಭೆ ಅಧಿಕಾರಿಗಳಿಗೂ ಸಿಗುತ್ತಿಲ್ಲ. ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಪತ್ರ ಬರೆದರೂ ಉತ್ತರಿಸುವುದಿಲ್ಲ. ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದಾಗಿ ಜನರಿಂದ ಬೈಸಿಕೊಳ್ಳುವಂತಾಗಿದೆ ಎಂದು ನಗರಸಭೆ ಪೌರಾಯುಕ್ತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅರ್ಧಂಬರ್ಧ ಕಾಮಗಾರಿಯನ್ನು ಪೂರ್ಣಗೊಳಿಸುವವರು ಯಾರು ಎಂದು ಸ್ಥಳೀಯ ನಿವಾಸಿಗಳು ಎದುರು ನೋಡುವಂತಾಗಿದೆ.

ಅಪೂರ್ಣ ಕಾಮಗಾರಿಯಿಂದಾಗಿ ವ್ಯಾಪಾರದಲ್ಲಿ ನಷ್ಟವಾಗುತ್ತಿದೆ. ಇನ್ನು ನಡೆದಿರುವ ಅಲ್ಪಸ್ವಲ್ಪ ಕಾಮಗಾರಿಯೂ ಕಳಪೆಯಾಗಿದೆ. ಅಧಿಕಾರಿಗಳು ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದ್ದಾರೆ. ಈ ಕಾಮಗಾರಿ ಅವ್ಯವಹಾರದ ಬಗ್ಗೆ ತನಿಖೆ ನಡೆಯಬೇಕು. ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕೆಆರ್‌ಐಡಿಎಲ್‌ಗೆ ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ತಾಕೀತು ಮಾಡಬೇಕು. ಅಶ್ವತ್ಥ್ ಹರೂರು ಅಂಗಡಿ ಮಾಲೀಕ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವ ಬಗ್ಗೆ ಎರಡು ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬಗ್ಗೆ ಮಾತನಾಡಲು ಕರೆ ಮಾಡಿದರೆ ಕರೆ ಸ್ವೀಕರಿಸುವ ಸೌಜನ್ಯವೂ ಕೆಆರ್‌ಐಡಿಎಲ್ ಇಂಜಿನಿಯರ್‌ಗಳಿಗೆ ಇಲ್ಲವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದೇನೆ. ಶಿವನಂಕಾರಿಗೌಡ ನಗರಸಭೆ ಪೌರಾಯುಕ್ತ ಕ್ರಿಯಾಯೋಜನೆ ಅನ್ವಯ ಕಾಮಗಾರಿ ನಡೆಸಲಾಗುತ್ತಿದೆ. ಕೆಲ ಪ್ರದೇಶದಲ್ಲಿ ಚರಂಡಿ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಿಲ್ಲ. ಸ್ಥಳೀಯರು ಎಲ್ಲ ಕಡೆ ಚರಂಡಿ ಮಾಡುವವರೆಗೆ ಕಾಮಗಾರಿ ನಡೆಸದಂತೆ ತಡೆಹಿಡಿದಿರುವ ಪರಿಣಾಮ ಕಾಮಗಾರಿ ನಿಲ್ಲಿಸಲಾಗಿದೆ. ನಡೆದಿರುವ ಕಾಮಗಾರಿಯಲ್ಲಿ ಯಾವುದೇ ತೊಂದರೆ ಇದ್ದರೆ ಸರಿಪಡಿಸಲಾಗುವುದು. ಲಕ್ಷ್ಮಿ ಸಹಾಯಕ ಇಂಜಿನಿಯರ್, ಕೆಆರ್‌ಐಡಿಎಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net