ಡಾ.ಕಂಬಾರರ ನಾಟಕಗಳಲ್ಲಿ ಸಮಕಾಲೀನ ಸಮಸ್ಯೆಗಳ ನಿರೂಪಣೆ

KAMBARA
ಹಿರೇಸಿಂದೋಗಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಡಾ.ಚಂದ್ರಶೇಖರ ಕಂಬಾರರ ನಾಟಕ ಪ್ರದರ್ಶನವನ್ನು ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಉದ್ಘಾಟಿಸಿದರು. ರಂಗಕರ್ಮಿ ಲಕ್ಷ್ಮಣ, ಉಪನ್ಯಾಸಕ ವೀರಶೇಖರ ಪತ್ತಾರ, ವೀರಣ್ಣ, ಐ.ಎನ್.ಪಾಟೀಲ್, ಅನಿತಾ, ಆಂಜನೇಯ, ಜಯಪಾಲರಡ್ಡಿ, ಸಂಗೀತಾ ಇತರರು ಇದ್ದರು.
Published on

ಅಳವಂಡಿ: ಕಾದಂಬರಿಕಾರ ಡಾ.ಚಂದ್ರಶೇಖರ ಕಂಬಾರರು ನಾಟಕಗಳನ್ನು ರಚಿಸುವ ಮೂಲಕ ಭಾರತೀಯ ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಮಕಾಲೀನ ಸಮಸ್ಯೆಗಳನ್ನು ಅವರ ನಾಟಕಗಳ ಹಂದರದಲ್ಲಿ ಕಾಣಬಹುದು ಎಂದು ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಅಭಿಪ್ರಾಯಪಟ್ಟರು.

ಸಮೀಪದ ಹಿರೇಸಿಂದೋಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಡಾ.ಚಂದ್ರಶೇಖರ ಕಂಬಾರ ಅವರ ಬೆಪ್ಪು ತಕ್ಕಡಿ, ಬೋಳೆಶಂಕರ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಡಾ.ಕಂಬಾರರ ನಾಟಕಗಳಲ್ಲಿ ಜಾನಪದ ಹಾಗೂ ಆಧುನಿಕ ನಾಟಕೀಯ ಪ್ರಕಾರಗಳ ಮಿಶ್ರಣವಿದೆ. ಕನ್ನಡ ಸಾಹಿತ್ಯಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡ ಸಾಹಿತ್ಯದ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸಿರಿಸಂಪಿಗೆ, ತಿರುಕನ ಕನಸು, ಶಿವರಾತ್ರಿ, ಋಷ್ಯಶೃಂಗ, ಜೋಕುಮಾರಸ್ವಾಮಿ, ಸಂಗ್ಯಾ ಬಾಳ್ಯಾ, ಬೋಳೆ ಶಂಕರ ಮುಂತಾದ ನಾಟಕಗಳನ್ನು ರಚಿಸಿ ರಂಗಭೂಮಿಗೆ ಕೊಡುಗೆ ನೀಡಿದ್ದಾರೆ ಎಂದರು.

ಉಪನ್ಯಾಸಕ ವೀರಶೇಖರ ಪತ್ತಾರ ಮಾತನಾಡಿ, ಮಹಾವಿದ್ಯಾಲಯದಲ್ಲಿ ಪ್ರದರ್ಶನಗೊಂಡ ನಾಟಕಗಳ ಪ್ರತಿಯೊಂದು ಪಾತ್ರಗಳು ಜೀವಂತವಾಗಿದ್ದವು. ಮಕ್ಕಳಿಗೆ ಮನನವಾಗಿದ್ದು ರಂಜನೀಯವಾಗಿದ್ದವು. ನಾಟಕ ಪಠ್ಯಕ್ಕೆ ಪೂರಕವಾಗಿದ್ದು ವಿದ್ಯಾರ್ಥಿಗಳ ಮನಸ್ಸಿಗೆ ಅಚ್ಚೊತ್ತಿವೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ವೈಯಕ್ತಿಕ ಪ್ರಜ್ಞೆಯನ್ನು ಎಚ್ಚರಗೊಳಿಸುವಂತೆ ಇದ್ದವು ಎಂದು ಹೇಳಿದರು.

ನಾಟಕದ ನಿರ್ದೇಶಕ, ರಂಗಕರ್ಮಿ, ರಂಗದಾರ ರೆಪರ್ಟಿಯ ಸಂಚಾಲಕ ಲಕ್ಷ್ಮಣ ಪೀರಗಾರ ಮಾತನಾಡಿ, ಸಮಾಜದಲ್ಲಿನ ಓರೆ ಕೋರೆಗಳನ್ನು ತಿದ್ದುವಲ್ಲಿ ರಂಗಭೂಮಿ ಕಲೆ ಅತ್ಯಂತ ಪರಿಣಾಮಕಾರಿಯಾಗಿದೆ. ತಂಡದ ಮೂಲಕ ಶಾಲಾ-ಕಾಲೇಜುಗಳ ಪಠ್ಯಗಳನ್ನು ರಂಗಭೂಮಿಯ ಮುಖೇನ ವಿದ್ಯಾರ್ಥಿಗಳಿಗೆ ತಲುಪಿಸುವುದೇ ಮುಖ್ಯ ಉದ್ದೇಶ ಎಂದರು.

ಉಪನ್ಯಾಸಕರಾದ ವೀರಣ್ಣ ಜೋಗಿನ, ಐ.ಎನ್.ಪಾಟೀಲ್, ಅನಿತಾ ಧಲಬಂಜನ, ಗುಜ್ಜಲ ಆಂಜನೇಯ, ಜಯಪಾಲರಡ್ಡಿ, ಸಂಗೀತಾ ಬೀಳಗಿಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net