

ಆರ್.ಕೃಷ್ಣ ಮೈಸೂರು
ನಗರದ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ರಾಜ್ಯದ 181 ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕ ಪಟ್ಟಿಗೆ ಸೇರ್ಪಡೆಗೊಳಿಸಲು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ಈಗಾಗಲೇ 848 ಸ್ಥಳಗಳನ್ನು ಸಂರಕ್ಷಿತ ಸ್ಮಾರಕ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದ್ದು, ಹೊಸದಾಗಿ ಇನ್ನೂ 181 ಸ್ಮಾರಕಗಳನ್ನು ಗುರುತಿಸಲಾಗಿದೆ. ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಜಿಲ್ಲೆಯ 50 ದೇವಸ್ಥಾನ, ಧಾರ್ಮಿಕ ಸ್ಥಳಗಳನ್ನು ಸಂರಕ್ಷಿತ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ರಾಜ್ಯದ ಸಂರಕ್ಷಿತ ಸ್ಮಾರಕಗಳ ಸಂಖ್ಯೆ 1029ಕ್ಕೆ ಏರಿಕೆ ಆಗಲಿದೆ.
ರಾಜ್ಯದ ಐತಿಹಾಸಿಕ ಮಹತ್ವವುಳ್ಳ ಪ್ರಾಚ್ಯಾವಶೇಷಗಳು, ದೇವಾಲಯಗಳು, ಸ್ಮಾರಕಗಳನ್ನು ಸಂರಕ್ಷಿಸಿ ದಾಖಲೀಕರಿಸುವ ಸಂರಕ್ಷಣಾ ಯೋಜನೆಯನ್ನು ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ರೂಪಿಸಿದೆ. ಇಲಾಖೆಯ ಈ ಶಿಫಾರಸಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕರೆ ರಾಜ್ಯದಲ್ಲಿರುವ ಸಂರಕ್ಷಿತ ಸ್ಮಾರಕಗಳ ಸಂಖ್ಯೆ ಏರಿಕೆ ಆಗಲಿದೆ.
ನೂರು ವರ್ಷ ಹಳೆಯ, ಅಸ್ತಿತ್ವದಲ್ಲಿರುವ ಯಾವುದೇ ಸ್ಮಾರಕ, ದೇವಾಲಯ, ಸಮಾಧಿ, ಶಾಸನ, ಶಿಲೆಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಣೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಂತಹ ಅಸುರಕ್ಷಿತ ಸ್ಮಾರಕ ಮತ್ತು ಪ್ರಾಚ್ಯಾವಶೇಷಗಳನ್ನು ರಾಜ್ಯದೆಲ್ಲೆಡೆ ಸರ್ವೇ ನಡೆಸಿ ಗುರುತಿಸುವ ಕಾರ್ಯವನ್ನು ಮಾಡುತ್ತಿದೆ.
ಜತೆಗೆ, ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಅಧಿನಿಯಮ 1961 ಹಾಗೂ 1965ರ ನಿಯಮದ ಅನ್ವಯ ಘೋಷಣೆಗಾಗಿ ಅಂತಹ ಅಸುರಕ್ಷಿತ ಸ್ಮಾರಕಗಳ ಬಗ್ಗೆ ಕಂದಾಯ ದಾಖಲೆಯ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.
ಹೊಸದಾಗಿ ಗುರುತಿಸಿರುವ 181 ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಣೆ ಮಾಡಿದರೆ ಕಾನೂನಿನಡಿ ಸಂರಕ್ಷಣೆಗೆ ಅನುಕೂಲವಾಗುವುದಲ್ಲದೆ, ಸ್ಮಾರಕಗಳನ್ನು ಸಂಘ-ಸಂಸ್ಥೆಗಳು ಸೇರಿದಂತೆ ಆಸಕ್ತರಿಗೆ ದತ್ತು ನೀಡುವ ಮೂಲಕ ನಿರ್ವಹಣೆ ಮಾಡಬಹುದಾಗಿದೆ.
ಸಂರಕ್ಷಿತ ಪಟ್ಟಿಗೆ ಸೇರ್ಪಡೆಗೆ ಶಿಫಾರಸು:
ಮೈಸೂರು ನಗರದ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ, ಮಹಾಬಲೇಶ್ವರ (ಮಹಾಲಿಂಗೇಶ್ವರ), ಕಾಲಭೈರವೇಶ್ವರ ದೇವಸ್ಥಾನ, ಬೆಟ್ಟದ ಪಾದ (ಮೆಟ್ಟಿಲು), ದೇವಿಕೆರೆ, ಮಂಟಪ ಹಾಗೂ ಗುಡಿಗಳನ್ನು ಹೆಸರಿಸಲಾಗಿದೆ.
ಮೈಸೂರು ತಾಲೂಕಿನಲ್ಲಿ ವರಕೋಡಿನ ವರದರಾಜ ದೇವಾಲಯ ಮತ್ತು ಕಲ್ಯಾಣಿ, ಸಿಂಧುವಳ್ಳಿಯ ಸೋಮೇಶ್ವರ, ತಳೂರಿನ ಭುಜಂಗೇಶ್ವರ, ಕುಮಾರಬೀಡುವಿನ ಬಸವೇಶ್ವರ, ಬೋಗಾದಿಯ ಬೋಗೇಶ್ವರಸ್ವಾಮಿ, ಹಿನಕಲ್‌ನ ನನ್ನೇಶ್ವರಸ್ವಾಮಿ ಹಾಗೂ ಸಿದ್ದಲಿಂಗಪುರದ ಚಂದ್ರಮೌಳೇಶ್ವರ ದೇವಾಲಯ, ಕೆ.ಆರ್.ನಗರ ತಾಲೂಕಿನಲ್ಲಿ ಮಲ್ಲೇಶ್ವರ, ಅಡಗನಹಳ್ಳಿಯ ಲಕ್ಷ್ಮೀದೇವಿ, ಬ್ಯಾಡರಹಳ್ಳಿಯ ಅರ್ಕೇಶ್ವರ ಹಾಗೂ ಈಶ್ವರ, ಹಳೇ ಯಡತೊರೆಯ ಅರ್ಕೇಶ್ವರ ದೇವಾಲಯ ಸೇರ್ಪಡೆಗೆ ಗುರುತಿಸಲಾಗಿದೆ.
ನಂಜನಗೂಡಿನ ಹುರದ ಮಲ್ಲಿಕಾರ್ಜುನ ಮತ್ತು ಭ್ರಮರಾಂಬ, ಹಂಚಿಪುರದ ಮಲ್ಲಿಕಾರ್ಜುನ, ದೇಬೂರಿನ ರಾಮೇಶ್ವರ, ಬಸವನಪುರದ ಪಾತಾಳೇಶ್ವರ, ವೈದ್ಯನಾಥೇಶ್ವರ, ಅರ್ಕೇಶ್ವರ ಹಾಗೂ ಬಸವೇಶ್ವರ ದೇವಾಲಯಗಳು, ಚಿಕ್ಕಯ್ಯನಛತ್ರದ ಪ್ರಸನ್ನ ನಂಜುಂಡೇಶ್ವರ, ಹುಲ್ಲಹಳ್ಳಿಯ ಮಲ್ಲಿಕಾರ್ಜುನಸ್ವಾಮಿ, ಕೆಂಬಾಳಿನ ಭೀಮೇಶ್ವರ, ಬಿದರಗೂಡಿನ ಮಹಾಲಿಂಗೇಶ್ವರ, ಕೂಗ್ಲೂರಿನ ಲಕ್ಷ್ಮೀಕಾಂತ ದೇವಸ್ಥಾನ, ಪಂಚ ಯತಿಗಳ ಬೃಂದಾವನವನ್ನು ಸೇರಿಸಲು ನಿರ್ಧರಿಸಲಾಗಿದೆ.
ಹುಣಸೂರು ತಾಲೂಕಿನಲ್ಲಿ ಯಮಗುಂಭದ ಪಾರ್ಶ್ವನಾಥ ಬಸದಿ, ಮರದೂರಿನ ಲಕ್ಷ್ಮೀ ವೇಣುಗೋಪಾಲಸ್ವಾಮಿ ದೇವಾಲಯ, ತರೀಕಲ್ಲಿನ ಕಾಶೀಲಿಂಗ ಹಾಗೂ ಸೋಮೇಶ್ವರ, ಕಟ್ಟೆಮಳಲವಾಡಿಯ ವೆಂಕಟೇಶ್ವರ ದೇವಸ್ಥಾನ, ಎಚ್.ಡಿ. ಕೋಟೆ ತಾಲೂಕಿನ ಹಂಪಾಪುರದ ಲಕ್ಷ್ಮೀಕಾಂತಸ್ವಾಮಿ ಹಾಗೂ ಗಂಗಾಧರೇಶ್ವರ ದೇವಸ್ಥಾನ, ಅಂತರಸಂತೆಯ ನೀಲಕಂಠೇಶ್ವರ ದೇವಸ್ಥಾನವನ್ನು ಪಟ್ಟಿಗೆ ಶಿಫಾರಸು ಮಾಡಲಾಗಿದೆ.
ತಿ.ನರಸೀಪುರ ತಾಲೂಕಿನ ಸೋಸಲೆಯ ಅರ್ಕೇಶ್ವರ ದೇವಾಲಯ, ಹೊಳೆನರಸಿಂಹಸ್ವಾಮಿ, ಮೂಗೂರಿನ ದೇಶೇಶ್ವರಸ್ವಾಮಿ, ತ್ರಿಪುರಸುಂದರಿ ಅಮ್ಮಣ್ಣಿಯವರ ದೇವಸ್ಥಾನ, ತಲಕಾಡಿನ ಜನಾರ್ದನ ದೇವಸ್ಥಾನದ ಹೆಸರನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.
ಸಂರಕ್ಷಣೆಗೆ ಕಾನೂನಿನ ಬಲ ಬರುತ್ತದೆ
ನಮ್ಮ ಪುರಾತನ ಪರಂಪರೆ ಸಂರಕ್ಷಣೆ ಉದ್ದೇಶದಿಂದ ರಾಜ್ಯದಲ್ಲಿ ಹೊಸದಾಗಿ 181 ದೇವಸ್ಥಾನ, ಧಾರ್ಮಿಕ ಸ್ಥಳಗಳನ್ನು ಸಂರಕ್ಷಿತ ಸ್ಮಾರಕ ಪಟ್ಟಿಗೆ ಸೇರ್ಪಡೆಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಸರ್ಕಾರದ ಅನುಮೋದನೆ ದೊರೆತರೆ ಅಂತಹ ಸ್ಥಳಗಳನ್ನು ಕಾನೂನಿನ ಬಲದ ಮೂಲಕ ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ.
ಎ.ದೇವರಾಜು, ಆಯುಕ್ತ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ