ರಾಜ್ಯಮಟ್ಟದ ಅರ್ಚಕರ ತರಬೇತಿ ಶಿಬಿರ ಸಮಾರೋಪ

image_6487327
Published on

ಆದಿ ಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ
ನಾಗಮಂಗಲ: ಯಾವ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತದೆಯೋ ಅಲ್ಲಿ ಜನರು ಸಂಘಟಿತರಾಗುವ ಜತೆಗೆ ಆ ದೇವಾಲಯಗಳಿಂದ ಧಾರ್ಮಿಕ ಮನೋಭಾವವು ಗಟ್ಟಿಗೊಳ್ಳುತ್ತದೆ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಆದಿಚುಂಚನಗಿರಿಯ ಶ್ರೀಕಾಲಭೈರವೇಶ್ವರ ಸಂಸ್ಕೃತ ವೇದ-ಆಗಮ ಕಾಲೇಜಿನಲ್ಲಿ ಗುರುವಾರ ಜರುಗಿದ 2023-24ನೇ ಸಾಲಿನ ರಾಜ್ಯ ಮಟ್ಟದ 16ನೇ ಅರ್ಚಕರ ವೃತ್ತಿ ಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ನಡೆದ ಶಿಬಿರದಲ್ಲಿ 10 ದಿನಗಳ ಕಾಲ ವಿಶ್ವಾಸವಿಟ್ಟು ಶ್ರೀಮಠದಲ್ಲಿ ಇದ್ದು ಎಲ್ಲರೂ ಕಲಿತಿದ್ದೀರಿ. ಕಲಿತಿದ್ದನ್ನು ಚೆನ್ನಾಗಿ ರೂಢಿಸಿಕೊಳ್ಳಿ, ವಿದ್ಯೆಯು ಕೇವಲ ಸಾಧಕನ ಸ್ವತ್ತಾಗಿದ್ದು, ಪ್ರಯತ್ನಪೂರ್ವಕವಾಗಿ ಸಾಧಿಸಿಕೊಳ್ಳಿ. ದೇವಸ್ಥಾನಗಳಲ್ಲಿ ಸತ್ಸಂಗ, ಭಜನೆಯನ್ನು ಸೇರಿದಂತೆ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸುವಂತೆ ಮಾಡಿ. ಅರ್ಚಕರಾದವರು ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಜನರನ್ನು ಸಂಘಟಿಸಿ. ನಮ್ಮ ಧರ್ಮಗಳ ಬಗ್ಗೆ ನಂಬಿಕೆಯನ್ನು ಬೆಳೆಸಿಕೊಳ್ಳಿ. ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಬಸವಣ್ಣ, ರಾಮಾನುಜರು ಹೇಳಿದ ಸಮಾನತೆ, ಸಮನ್ವಯತೆ ಪಡೆದುಕೊಳ್ಳಬೇಕು. ಕಲಿತದ್ದನ್ನು ರೂಢಿಸಿಕೊಂಡು ಒಳ್ಳೆಯ ಅರ್ಚಕರಾಗಿ ಸಗುಣೋಪಾಸನೆಯನ್ನು ಮಾಡಿಕೊಂಡು ಬದುಕಿರಿ ಎಂದರು.
ದೇವಾಲಯದಲ್ಲಿ ಅರ್ಚಕರು ಬೆಳಗುವ ಧೂಪ ದೀಪಗಳು ತಾವು ಉರಿದು ಉಳಿದವರಿಗೆ ಬೆಳಕನ್ನು ನೀಡುತ್ತದೆ. ಹಾಗೆಯೇ ನಾವು ಸಹ ಬೇರೆಯರಿಗೆ ಒಳ್ಳೆಯದನ್ನು ಬಯಸುತ್ತಾ ಬಾಳಬೇಕು. ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಂಡು ಶ್ರದ್ಧಾಭಕ್ತಿಯಿಂದ ದೇವರಿಗೆ ಅರ್ಪಿಸಬೇಕು. ಹಣಕ್ಕಾಗಿ ಯಾರೂ ಆಸೆ ಪಡಬಾರದು. ದಾನಧರ್ಮಗಳನ್ನು ಮಾಡಿ ಒಳ್ಳೆಯವರಾಗಿ ಬಾಳಿ ಎಂದು ಕಿವಿಮಾತು ಹೇಳಿದರು. ಗಂಗಾಧರೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಡಿ.ಟಿ.ಕೇಶವಮೂರ್ತಿ, ಪ್ರಾಂಶುಪಾಲ ಶ್ರೀಕಾಂತ ಪುರೋಹಿತ, ಅರ್ಚಕ ತ್ರಿದಂಡಿ ತಿರುರಾಮಾನುಜ ಜೀಯರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net