

ಕುಶಾಲನಗರ:
ನದಿ ತಟಗಳ ಸಂರಕ್ಷಣೆಯೊAದಿಗೆ ಸ್ವಚ್ಛತೆಗಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್ ಹೇಳಿದರು. ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಮಹಾ ಆರತಿ ಬಳಗ ಆಶಯದಲ್ಲಿ ಸ್ಥಳೀಯ ಮಹಿಳಾ ಭಜನಾ ಮಂಡಳಿ ಸಹಯೋಗದೊಂದಿಗೆ ಭಾನುವಾರ ನಡೆದ 166 ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸಕ್ತ ಶುದ್ಧ ನೀರಿಗಾಗಿ ಹಣ ನೀಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರಕೃತಿದತ್ತ ಜಲಮೂಲಗಳನ್ನು ಸಂರಕ್ಷಿಸಿ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕಳೆದ ಹಲವು ವರ್ಷಗಳಿಂದ ನದಿ ಮೂಲಗಳ ಸಂರಕ್ಷಣೆಗಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೋರಾಟ ನಡೆಸುತ್ತಿರುವ ಬಳಗದ ಕಾರ್ಯಕ್ರಮಗಳು ಶ್ಲಾಘನಾರ್ಹ ಎಂದರು.
ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಅರ್ಚಕ ಕೃಷ್ಣಮೂರ್ತಿ ಭಟ್ ಅರ್ಚನೆ, ಅಷ್ಟೋತ್ತರ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ನಡೆಸಿ ನದಿಗೆ ಸಾಮೂಹಿಕವಾಗಿ ಆರತಿ ಕಾರ್ಯಕ್ರಮ ನೆರವೇರಿಸಿದರು. ಕಾರ್ತಿಕ ಹುಣ್ಣಿಮೆ ಅಂಗವಾಗಿ ನದಿ ತಟದಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ. ಎನ್. ಚಂದ್ರಮೋಹನ್, ನಮಾಮಿ ಕಾವೇರಿ ಬಳಗದ ಪ್ರಮುಖರಾದ ಮಂಡೆಪAಡ ಬೋಸ್ ಮೊಣ್ಣಪ್ಪ , ಡಿ. ಆರ್. ಸೋಮಶೇಖರ್, ಎ. ಪಿ. ಸುಬ್ಬಯ್ಯ, ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ, ಜನಜಾಗೃತಿ ವೇದಿಕೆಯ ಪ್ರಮುಖರಾದ ಶ್ರೀ ಲಕ್ಷ್ಮಿ, ಬಿ. ಎಂ. ರವಿಚಂದ್ರ, ಮಹಿಳಾ ಭಜನಾ ಮಂಡಳಿ ಪ್ರಮುಖರಾದ ಪದ್ಮ ಪುರುಷೋತ್ತಮ್, ರಮಾ ವಿಜಯೇಂದ್ರ ಮತ್ತಿತರರು ಇದ್ದರು.
ಇದೇ ಸಂದರ್ಭ ಹುಣ್ಣಿಮೆ ಪ್ರಯುಕ್ತ ನಮಾಮಿ ಕಾವೇರಿ ತಂಡದ ಸದಸ್ಯರಿಂದ ಭಾಗಮಂಡಲ ಸಂಗಮ, ಕುಂದಚೇರಿ, ಗೂಡುಗದ್ದೆ, ಕರಡಿಗೋಡು, ಕೂಡುಮಂಗಳೂರು, ಕೊಪ್ಪ, ಕಣಿವೆ ಸೇರಿದಂತೆ ನದಿ ಉದ್ದಕ್ಕೂ ತಟಗಳಲ್ಲಿ ಮಹಾ ಆರತಿ ಕಾರ್ಯಕ್ರಮ ನಡೆಯಿತು.