ಅರಟಾಳಕ್ಕೆ ಅಗ್ರಸ್ಥಾನವಿತ್ತ ನರೇಗಾ

290420 Sankanuru Narega work Checking
Published on

ಬೆಳಗಾವಿ: ಕರೊನಾ ಸೋಂಕು ನಿಯಂತ್ರಣ ಉದ್ದೇಶದಿಂದ ಘೋಷಿಸಿದ್ದ ಲಾಕ್‌ಡೌನ್ ವೇಳೆ ತೀವ್ರ ತೊಂದರೆ ಅನುಭವಿಸುತ್ತಿದ್ದ ಕೂಲಿ ಕಾರ್ಮಿಕರಿಗೆ ನರೇಗಾದಡಿ ಅತೀ ಹೆಚ್ಚು ಕೆಲಸ ಕೊಟ್ಟ ಹೆಗ್ಗಳಿಕೆಗೆ ಅಥಣಿ ತಾಲೂಕಿನ ಅರಟಾಳ ಗ್ರಾಪಂ ಪಾತ್ರವಾಗಿದೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ 53,640 ಮಾನವ ದಿನಗಳನ್ನು ಸೃಜನೆ ಮಾಡಿ ಜಿಲ್ಲೆಯ 506 ಗ್ರಾಪಂಗಳ ಪೈಕಿ ಟಾಪ್-10 ಪಟ್ಟಿಯಲ್ಲಿ ಅರಟಾಳ ಗ್ರಾಪಂ ಮೊದಲ ಸ್ಥಾನ ಪಡೆದಿದೆ.

ರಾಯಬಾಗ ತಾಲೂಕಿನ ಮೇಖಳಿ ಗ್ರಾಪಂ 50,288 ಮಾನವ ದಿನ ಸೃಜಿಸಿ ದ್ವಿತೀಯ, ಬೈಲಹೊಂಗಲ ತಾಲೂಕಿನ ಹನಬರಹಟ್ಟಿ ಗ್ರಾಪಂ 40,788 ಮಾನವ ದಿನ ಸೃಜಿಸಿ ತೃತೀಯ ಸ್ಥಾನದಲ್ಲಿವೆ. ನಂತರದ ಸ್ಥಾನದಲ್ಲಿ ಬೆಳಗಾವಿ ತಾಲೂಕಿನ ಹೊಸವಂಟಮೂರಿ ಗ್ರಾಮ ಪಂಚಾಯಿತಿ 38,367, ಕಿತ್ತೂರು ತಾಲೂಕಿನ ಬೈಲೂರ 31,431, ಹುಕ್ಕೇರಿ ತಾಲೂಕಿನ ಹೊಸೂರು 30,284, ಹಂಚಿನಾಳ 28,798, ಇಸ್ಲಾಂಪುರ 28,666, ಮನಗುಟ್ಟಿ 28,291, ಬೈಲಹೊಂಗಲ ತಾಲೂಕಿನ ಬೆಳವಡಿ 27,610 ಮಾನವ ದಿನಗಳನ್ನು ಸೃಜಿಸಿ ಆಗ್ರ 10 ಸ್ಥಾನಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ವಿಭಿನ್ನ ಕಾಮಗಾರಿ: ನರೇಗಾದಡಿ ಹೆಚ್ಚು ಮಾನವ ದಿನ ಸೃಷ್ಟಿಸಿದ ಹತ್ತೂ ಗ್ರಾಮ ಪಂಚಾಯಿತಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ವಿಭಿನ್ನ ಕಾಮಗಾರಿ ಕೈಗೊಂಡಿವೆ. ಮುಖ್ಯವಾಗಿ ನದಿ ನೀರಿನ ಸಂರಕ್ಷಣೆ, ಬದು ನಿರ್ಮಾಣಕ್ಕೆ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಅಲ್ಲದೆ, ನಾಲೆ ಹಾಗೂ ಕೆರೆ ಹೂಳು ಎತ್ತುವುದು, ಕೃಷಿ ಹೊಂಡ ನಿರ್ಮಾಣ ಕಾಮಗಾರಿ ಕೈಗೊಂಡಿದ್ದಾರೆ. ವಿಶೇಷವಾಗಿ ಸಣ್ಣ ಹಿಡುವಳಿ ರೈತರು ತಮ್ಮ ಹೊಲಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯುವುದಕ್ಕೆ ಕುಟುಂಬ ವರ್ಗಕ್ಕೂ ಜಾಬ್ ಕಾರ್ಡ್ ಮಾಡಿಕೊಡಲಾಗಿದೆ.

ಖಾನಾಪುರ ಹೆಗ್ಗಳಿಕೆ: ಖಾನಾಪುರ ತಾಲೂಕು ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ ಅತೀ ಹೆಚ್ಚು ಮಾನವ ದಿನ ಸೃಜಿಸಿದ ಖ್ಯಾತಿಗೆ ಪಾತ್ರವಾಗಿದೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ 5.55 ಲಕ್ಷ ಮಾನವ ದಿನ ಸೃಜಿಸಿ, ಗುರಿಗಿಂತ ಹೆಚ್ಚು ಅಂದರೆ ಶೇ. 122.67ರಷ್ಟು ಸಾಧನೆ ಮಾಡಿದೆ. ಇಲ್ಲಿ ಮುಖ್ಯವಾಗಿ ಅರಣ್ಯೀಕರಣ, ಜಲಮೂಲಗಳ ಸಂರಕ್ಷಣೆ, ಕೃಷಿ ಹೊಂಡಗಳ ನಿರ್ಮಾಣ ಸೇರಿ ವಿಶೇಷವಾಗಿ ಜಲಾಮೃತ ಯೋಜನೆಯಡಿ ಹಲವಾರು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕುವಾರು ಪ್ರಗತಿಯಲ್ಲಿ ಬೈಲಹೊಂಗಲ ದ್ವಿತೀಯ: ತಾಲೂಕುವಾರು ಪ್ರಗತಿ ಪಟ್ಟಿಯಲ್ಲಿ ಬೈಲಹೊಂಗಲ ತಾಲೂಕು ದ್ವಿತೀಯ ಸ್ಥಾನದಲ್ಲಿದೆ. 3.6 ಲಕ್ಷ ಮಾನವ ದಿನ ಸೃಜಿಸಿ ಏಪ್ರಿಲ್‌ನಿಂದ ಜುಲೈ ಅಂತ್ಯದ ಅವಧಿಯ ಗುರಿಯಲ್ಲಿ ಈಗಾಗಲೇ ಶೇ. 110.84ರಷ್ಟು ಪ್ರಗತಿ ಸಾಧಿಸಿದೆ. ಕಿತ್ತೂರು ತಾಲೂಕು 1.9 ಲಕ್ಷ ಮಾನವ ದಿನ ಸೃಷ್ಟಿಸಿದ್ದು, ಶೇ. 85ರಷ್ಟು ಪ್ರಗತಿ ಸಾಧಿಸಿ ತೃತೀಯ ಸ್ಥಾನದಲ್ಲಿದೆ. ಸವದತ್ತಿ ತಾಲೂಕಿನಲ್ಲಿ 3.23 ಲಕ್ಷ ಮಾನವ ದಿನ ಸೃಜಿಸಿ ಗುರಿಯಲ್ಲಿ ಶೇ.80.76 ಸಾಧಿಸಿದೆ. ಹುಕ್ಕೇರಿ ತಾಲೂಕು 4.99 ಲಕ್ಷ ಮಾನವ ದಿನ ಸೃಜಿಸಿ ಗುರಿಯಲ್ಲಿ ಶೇ.78.24 ಸಾಧಿಸಿದೆ. ಬೆಳಗಾವಿ 3.75 ಲಕ್ಷ ಮಾನವ ದಿನ ಸೃಜಿಸಿ ಗುರಿಯಲ್ಲಿ ಈಗಾಗಲೇ ಶೇ. 76.67 ಪ್ರಗತಿ ಸಾಧಿಸಿದೆ.

ನರೇಗಾ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಅತೀ ಹೆಚ್ಚು ಮಾನವ ದಿನಗಳನ್ನು ಸೃಜಿಸಲಾಗಿದೆ. ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ನೀರಿನ ಸಂರಕ್ಷಣೆ ಮತ್ತು ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಮುಂದಿನ 2-3 ವರ್ಷದಲ್ಲಿ ರೈತರು ಈ ಎಲ್ಲ ಕಾಮಗಾರಿಯ ಫಲ ಪಡೆಯಲಿದ್ದಾರೆ. | ಡಾ.ಕೆ.ವಿ. ರಾಜೇಂದ್ರ ಜಿಲ್ಲಾ ಪಂಚಾಯಿತಿ ಸಿಇಒ ಬೆಳಗಾವಿ

| ಜಗದೀಶ ಹೊಂಬಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net