

ಚನ್ನಮ್ಮನ ಕಿತ್ತೂರು: ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನುಭಾವ ಅರಟಾಳ ರುದ್ರಗೌಡರು ಎಂದು ಎಸ್‌ಬಿಎಂ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಮಹೇಶ ಚನ್ನಂಗಿ ತಿಳಿಸಿದರು.
ಪಟ್ಟಣದ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾಭವನದಲ್ಲಿ ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಮಾಸಿಕ ಶಿವಾನುಭವ ಕಾರ್ಯಕ್ರಮ ನಿಮಿತ್ತ ‘ರಾವ ಬಹದ್ದೂರ್ ಅರಟಾಳ ರುದ್ರಗೌಡರ ಕೊಡುಗೆಗಳು’ ವಿಷಯ ಕುರಿತು ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸದಲ್ಲಿ ಮಾತನಾಡಿದರು.
ಅರಟಾಳ ರುದ್ರಗೌಡರು ಸಮಾಜದ ಅಭಿವೃದ್ಧಿಗಾಗಿ ಕೈಗೊಂಡ ಕೊಡುಗೆಗಳನ್ನು ಗಮನಿಸಿ ಬ್ರಿಟಿಷ್ ಸರ್ಕಾರ ಅವರಿಗೆ ಸರ್ ಮತ್ತು ರಾವ ಬಹದ್ದೂರ್ ಬಿರುದು ನೀಡಿ ಗೌರವಿಸಿರುವುದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿರುವುದು ಸಂತಸದ ವಿಷಯ. ಲೋಕಮಾನ್ಯ ತಿಳಕ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಇವರುಗಳಿಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದ ರುದ್ರಗೌಡರು ಕೇವಲ ಮೆಟ್ರಿಕ್ ವರೆಗೆ ಓದಿದ್ದರು. ಬೆಳಗಾವಿ ಉಪ ಕಲೆಕ್ಟರ್ ಆಗಿ ಡೆಪ್ಯುಟಿ ಚನ್ನಬಸಪ್ಪ, ಶಿರಸಂಗಿ ಲಿಂಗರಾಜರ ಜತೆಗೂಡಿ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಹರಿಕಾರರಾಗಿದ್ದಾರೆ ಎಂದು ಸ್ಮರಿಸಿದರು.
ಮೇಜರ್ ಡಾ.ಮೋಹನ ಅಂಗಡಿ ಮಾತನಾಡಿ, ಯುವಕರು ಕ್ರಿಯಾಶೀಲರಾಗಿ ಸತತ ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹೀಗಾಗಿ, ಸಕಾರಾತ್ಮಕ ಚಿಂತನೆ ಹಾಗೂ ಆದರ್ಶ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಲಿಂಗಾಯತರು ಗುಣಮಟ್ಟದ ಶಿಕ್ಷಣ ಪಡೆದು ಸ್ವಾಭಿಮಾನದಿಂದ ಬದುಕು ರೂಪಿಸಿಕೊಳ್ಳುವಲ್ಲಿ ಅರಟಾಳದ ರುದ್ರಗೌಡರ ಕೊಡುಗೆ ಅಪಾರವಾಗಿದೆ. ಹೀಗಾಗಿ, ಅವರ ಜೀವನ ಚರಿತ್ರೆ ಎಲ್ಲರಿಗೂ ಆದರ್ಶವಾಗಿದೆ ಎಂದು ತಿಳಿಸಿದರು.
ಕಸಾಪ ತಾಲೂಕಾಧ್ಯಕ್ಷ ಡಾ.ಎಸ್.ಬಿ.ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ಗಡಿಬಿಡಿ ವಚನ ಗಾಯನ ಪ್ರಸ್ತುತಪಡಿಸಿದರು. ಪ್ರೊ.ಎ.ಆರ್.ಕುಬಸದ, ಡಾ.ಎಸ್.ಪಿ.ಹಿರೇಮಠ, ಡಿ.ಆರ್.ಪಾಟೀಲ, ಬಸವರಾಜ ನಂದಗಡ , ಕಸಾಪ ಪದಾಧಿಕಾರಿಗಳು, ಮಹಿಳಾ ವೇದಿಕೆಯ ಸದಸ್ಯರು ಹಾಗೂ ಶರಣ ಶರಣೆಯರು ಪಾಲ್ಗೊಂಡಿದ್ದರು. ನಿಖಿತಾ ದಡ್ಡಿ ಸ್ವಾಗತಿಸಿದರು. ರಾಜಶೇಖರ ರಗಟಿ ನಿರೂಪಿಸಿದರು. ಮಹೇಶ್ವರ ಹೊಂಗಲ ವಂದಿಸಿದರು.