

ಮಂಗಳೂರು: ಪಿ.ಎನ್. ಆರ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಆರಾಟ ಕನ್ನಡ ಚಿತ್ರ ಜೂ. 21ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ.
ಚಿತ್ರದ ಟೀಸರ್, ಟ್ರೇಲರ್ ಹಾಗೂ ಎರಡು ಹಾಡುಗಳನ್ನು ಯೂಟ್ಯೂಬ್ ಚಾನೆಲ್ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಳಿಸಿದ್ದು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಚಿತ್ರದ ನಿರ್ದೇಶಕ ಪುಷ್ಪರಾಜ್ ರೈ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಮತ್ತು ಕೇರಳದ ಗಡಿಭಾಗಗಳಾದ ಮುಡಿಪು, ಆನೇಕಲ್ಲು, ಉಪ್ಪಳ, ಮಂಗಲ್ಪಾಡಿ ಹಾಗೂ ಕುಬಣೂರು ಪರಿಸರದಲ್ಲಿ ಸಿನೆಮಾ ಚಿತ್ರೀಕರಣಗೊಂಡಿದೆ. ಸುಮಾರು 20 ದಿನಗಳ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆದಿದ್ದು ರಾಘವೇಂದ್ರ ಹೊಳ್ಳ ಟಿ, ರಾಂಪ್ರಸಾದ್ ಕೆ., ನಿತೇಶ್ ಮಾಡಮ್ಮೆ ಹಾಗೂ ಸ್ನೇಹಿತರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಎಂದು ಅವರು ಹೇಳಿದರು.
ನಿರ್ದೇಶನ ತಂಡದಲ್ಲಿ ಜಯರಾಜ್ ಹೆಜಮಾಡಿ, ರೋಶನ್ ಆರ್. ಆಳ್ವ, ಹರ್ಷರಾಜ್ ಬಂಟ್ವಾಳ, ಅಭಿ ಬೋಳ್ಯಾರ್, ಸುಶಿನ್ ಕಾರ್ಯ ನಿರ್ವಹಿಸಿದ್ದು, ರವಿ ಸುವರ್ಣ ಛಾಯಾಗ್ರಹಣ, ದಾಮು ಕನ್ಸೂರ್ ಸಂಕಲನ, ರಾಘವೇಂದ್ರ ಬೀಜಾಡಿ ಹಾಗೂ ಶಮೀರ್ ಮುಡಿಪು ಸಂಗೀತ, ಎಚ್.ಎಸ್. ವೆಂಕಟೇಶ್ ಮೂರ್ತಿ ಹಾಗೂ ಯೋಗೀಶ್ ಸಾಹಿತ್ಯ ಒದಗಿಸಿದ್ದಾರೆ. ಶಮೀರ್ ಮುಡಿಪು ಹಾಗೂ ಶಾಲಿನಿ ಎಸ್. ಆರ್. ಹಿನ್ನೆಲೆ ಗಾಯನ ನೀಡಿದ್ದಾರೆ ಎಂದವರು ಹೇಳಿದರು.
ಸರ್ಕಾರಿ ಹಿ.ಪ್ರಾ. ಶಾಲೆ ಖ್ಯಾತಿಯ ರಂಜನ್ ಕಾಸರಗೋಡು, ವನ್ಯ ರೈ, ಜ್ಯೋತಿಶ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಅನಿಲ್ ರಾಜ್ ಉಪ್ಪಳ, ಚೇತನ್ ರೈ ಮಾಣಿ, ರವಿ ರಾಮಕುಂಜ, ಸುರೇಶ್ ಮಂಜೇಶ್ವರ, ಪ್ರಭಾಕರ್ ಕಾಸರಗೋಡು, ತೇಜಸ್ವಿನಿ ಕಿಶೋರ್, ಸಂದೀಪ್ ಭಕ್ತ, ಆಶಾ ಮಾರ್ನಾಡ್, ನಯನ ಸಾಲ್ಯಾನ್, ದೀಕ್ಷಾ ಭಾಗ್ಯರಾಜ್ ನಾವೂರು, ವಿನೋದ್ ಶೆಟ್ಟಿ, ಸಂಕೇಥ್, ಉದಯ ಶೆಟ್ಟಿ, ಉತ್ಸವ್ ವಾಮಂಜೂರು, ತುಳಸೀಧರನ್, ಶಶಿ ಗುಜರನ್ ಪಡುಬಿದ್ರಿ ನಟಿಸಿದ್ದಾರೆ ಎಂದು ಅವರು ವಿವರ ನೀಡಿದರು.
ಸಿನೆಮಾದ ಮೂಲಕಥೆಯನ್ನು ನೀಡಿರುವ ರಾಘವೇಂದ್ರ ಹೊಳ್ಳ, ಗಾಯಕರಾದ ಶಮೀರ್ ಮುಡಿಪು, ನಟರಾದ ರಂಜನ್ ಕಾಸರಗೋಡು, ಜ್ಯೋತಿಶ್ ಶೆಟ್ಟಿ, ಯೋಗೀಶ್ ಎ.ಎನ್., ಮೊದಲಾದವರು ಉಪಸ್ಥಿತರಿದ್ದರು.