ಅಭಿವೃದ್ಧಿಗೆ ಅರಸು ವಂಶಸ್ಥರ ಕೊಡುಗೆ ಅಪಾರ: ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮತ

06_02_Mdy_04(Arasu Sanga)
Published on

ಮಂಡ್ಯ: ನಾಡಿನ ಅಭಿವೃದ್ಧಿಗೆ ಅರಸು ಸಮುದಾಯದವರ ಕೊಡುಗೆ ಅಪಾರ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮುದಾಯವನ್ನು ಬಲಪಡಿಸಬೇಕು ಎಂದು ರಾಜವಂಶಸ್ಥ ಯುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅರಸು ಸಂಘದ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿದರು. ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ನಾಡಿಗಾಗಿ ಬಹಳಷ್ಟು ಯೋಜನೆಗಳನ್ನು ನೀಡಿದ್ದು, ಜನರ ಒಳಿತಿಗಾಗಿ ಜವಾಬ್ದಾರಿ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಿದ್ದರು. ಅದೇ ಮಾದರಿಯಲ್ಲಿ ಸಮುದಾಯದ ಸಂಘವೂ ಜನರ ಒಳಿತಿಗಾಗಿ ಸೇವೆ ಮಾಡಬೇಕು ಎಂದು ಹೇಳಿದರು.

ಒಡೆಯರ್ ಮನೆತನ ಆಡಳಿತ ವಿಚಾರದಲ್ಲೂ ಸಾಕಷ್ಟು ಕೊಡುಗೆ ನೀಡಿದೆ. ಇಂದಿಗೂ ಜನರ ಮನಸ್ಸಿನಲ್ಲಿ ಒಡೆಯರ್ ಮನೆತನದವರ ಬಗ್ಗೆ ಪ್ರೀತಿ, ವಿಶ್ವಾಸ ಇದೆ. ನಾಡಿಗೆ ಅವರು ಒಳ್ಳೆಯದನ್ನೇ ಮಾಡುತ್ತಾರೆ. ಯಾವುದೇ ಕಾರಣಕ್ಕೂ ತೊಂದರೆ ನೀಡುವುದಿಲ್ಲ ಎಂದು ಮನವರಿಕೆಯಾಗಿದೆ. ಅಂತಹ ವಿಶ್ವಾಸಕ್ಕೆ ಧಕ್ಕೆ ತರುವ ರೀತಿಯಲ್ಲಿ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ತಮಿಳುನಾಡು ದ್ರೋಣಗಿರಿ ಪೀಠಾಪತಿ ಅಶೋಕ ರಾಜೇಂದ್ರ ಸ್ವಾಮೀಜಿ, ಸುಬ್ರಹ್ಮಣ್ಯ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶ್ರಾಂತ ಅಬಕಾರಿ ಅಧಿಕಾರಿ ಜಯರಾಮರಾಜೇ ಅರಸ್, ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ ವಿಕ್ರಮ್ ರಾಜೇ ಅರಸ್, ಜಿ.ಸಿ.ಜ್ಯೋತಿ ಅರಸ್, ಸಂಘದ ಜಿಲ್ಲಾಧ್ಯಕ್ಷ ಎ.ಎಂ.ಮಲ್ಲರಾಜೇ ಅರಸ್, ಉಪಾಧ್ಯಕ್ಷ ಮಾದರಾಜೇ ನಂಜರಾಜೇ ಅರಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net