

ಮೈಸೂರು: ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯಿಂದ ನಗರದಲ್ಲಿ ಮಂಗಳವಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮ ದಿನ ಆಚರಿಸಲಾಯಿತು.
ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿ ಅರಸು ಅವರ ಪ್ರತಿಮೆಗೆ ವಿವಿಧ ಗಣ್ಯರು ಪುಷ್ಪಾರ್ಚನೆ ಮಾಡಿ ಸ್ಮರಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿ ಕೊಟ್ಟ ಡಿ.ದೇವರಾಜ ಅರಸು ಅವರು ಕೊಟ್ಟ ಕಾರ್ಯಕ್ರಮಗಳು ಇಂದಿಗೂ ಜನರು ನೆನೆಯುವಂತವು ಎಂದು ಬಣ್ಣಿಸಿದರು.
ತಳ ಸಮುದಾಯದ ಜನರಿಗೆ ಸರ್ಕಾರದ ಯೋಜನೆಗಳು ನೇರವಾಗಿ ತಲುವಂತೆ ಮಾಡಿದ ಕೀರ್ತಿ ಅರಸು ಅವರಿಗೆ ತಲ್ಲ್ಲುತ್ತದೆ. ತಾವು ಬೆಳೆದಿದ್ದಲ್ಲದೆ ಅನೇಕ ರಾಜಕಾರಣಿಗಳನ್ನು ಬೆಳೆಸಿದ್ದು, ಈಗ ಅವರೆಲ್ಲ ಉನ್ನತ ಸ್ಥಾನಮಾನದಲ್ಲಿ ಇದ್ದಾರೆ. ನೊಂದ, ತಳ ಸಮುದಯದವರಿಗೆ ಶಿಕ್ಷಣ, ಆರೋಗ್ಯದಲ್ಲಿಯೂ ಅನುಕೂಲ ಮಾಡಿಕೊಟ್ಟರು. ಇಂತವರು ಯಾವುದೇ ಜಾತಿಗೆ ಸೀಮಿತಗೊಳ್ಳದೆ ಬೆಳೆದರು ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಜಾಕೀರ್ ಹುಸೇನ್ ಮಾತನಾಡಿ, ಡಿ.ದೇವರಾಜ ಅರಸು ಅವರ ಕರ್ಮಭೂಮಿಯಲ್ಲಿ ಜಯಂತಿಯನ್ನು ಇನ್ನು ಅದ್ದೂರಿಯಾಗಿ ನಡೆಸಬೇಕು. ಇಂದಿನ ಮಹಾನ್ ನಾಯಕರನ್ನು ಜನಾಂಗದವರು ತಮ್ಮ ಜಾತಿ, ಧರ್ಮಕ್ಕೆ ಸೀಮಿತಗೊಳ್ಳಿಸಿಕೊಳ್ಳ್ಳುತ್ತಿದ್ದಾರೆ. ಇಂತವರ ಮಧ್ಯೆ ಅರಸು ಅವರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತಗೊಳಿಸದೆ ಸಮಾಜ ಎಲ್ಲ ವರ್ಗದವರಿಗೂ ಸಲ್ಲುವಂತವರು ಎಂದು ಬಣ್ಣಿಸಿದರು.
ನಗರದಲ್ಲಿ ಅರಸು ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಸಮಿತಿ ಮಾಡಿದ ನಿರಂತರ ಹೋರಾಟದ ಫಲವಾಗಿ ನೂತನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ. ಜನ್ಮ ದಿನಾಚರಣೆಗೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದ್ದರೂ, ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ. ವಿಜಯದಶಮಿಗಾದರೂ ಪ್ರತಿಮೆ ಉದ್ಘಾಟನೆಗೊಳ್ಳಲಿ ಎಂದು ಕೋರಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಮಾಜಿ ಮೇಯರ್ ಪುರುಷೋತ್ತಮ, ರಂಗಕಲಾವಿದ ರಾಜಶೇಖರ ಕದಂಬ, ಮುಖಂಡರಾದ ಮೂಗೂರು ನಂಜುಂಡಸ್ವಾಮಿ, ಡೇರಿ ವೆಂಕಟೇಶ್, ಅಶೋಕಪುರಂ ಪಿ.ರಾಜು ಇತರರು ಇದ್ದರು.