

ಕೆ.ಆರ್.ನಗರ: ಸಮಾಜ ಸುಧಾರಣೆಯ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿರುವ ಯಾವುದೇ ಮಹನೀಯರನ್ನು ಕೇವಲ ಒಂದು ಜಾತಿ ಮತ್ತು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಗೌರವಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 109 ನೇ ಜನ್ಮ ದಿನಾಚರಣೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಬಡತನ, ಜೀತ ಪದ್ಧತಿ ಮತ್ತು ಶೋಷಣೆ ಮುಕ್ತ ಸಮಾಜ ನಿರ್ಮಾಣ, ಹಿಂದುಳಿದ ವರ್ಗಗಳಿಗೆ ಸಾಮಾಜಿಕವಾಗಿ ನ್ಯಾಯ ಒದಗಿಸಲು ಅವಿರತ ಹೋರಾಟ ಮಾಡಿದ ಮಹಾನ್ ಚೇತನ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಶ್ರೀಮಂತರು ಮತ್ತು ಮೇಲ್ವರ್ಗದ ವಿರೋಧವನ್ನು ಲೆಕ್ಕಿಸದೆ ಉಳುವವನೇ ಭೂ ಒಡೆಯ, ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳನ್ನು ಸೇರಿದಂತೆ ಅನೇಕ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಜನಮಾನಸದಲ್ಲಿ ಅಜರಾಮರರಾಗಿ ಉಳಿದಿದ್ದಾರೆ ಎಂದರು.
ಅರಸು ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅನುಷ್ಠಾನಕ್ಕೆ ತಂದ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದ ಮಹಾನ್ ನಾಯಕ. ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಸೌಲಭ್ಯ, ಶಿಷ್ಯ ವೇತನ ನೀಡುವಂತಹ ಜನಪರ ಯೋಜನೆಗಳನ್ನು ರೂಪಿಸಿ ಸಮಾನತೆಯ ಹರಿಕಾರರಾಗಿದ್ದಾರೆ. ಸಮಾಜದಲ್ಲಿ ಸಮಾನತೆಗೆ ಹೆಚ್ಚು ಒತ್ತು ನೀಡಿದ ಅರಸು ಅವರು ಧ್ವನಿ ಇಲ್ಲದರಿಗೆ ಧ್ವನಿಯಾಗಿ, ಶೋಷಿತ ವರ್ಗಗಳ ಜನರನ್ನು ಮತ್ತು ಅತ್ಯಂತ ಕಡುಬಡುವರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತಂದಿದ್ದಾರೆ ಎಂದು ನುಡಿದರು.
ನಮ್ಮ ತಾಲೂಕಿಗೂ ಅವರ ಕೊಡುಗೆ ಅಪಾರವಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಮ್ಮ ಕೆಸ್ತೂರು ಕೊಪ್ಪಲು ಗ್ರಾಮಗಳ ಭಾಗದ ರೈತರು ಮಳೆ ನೀರನ್ನೇ ಅವಲಂಬಿಸಿದ್ದರು. ಅಂತಹ ಸಂದರ್ಭದಲ್ಲಿ ಕಾಲುವೆಯನ್ನು ಆ ಭಾಗಕ್ಕೂ ವಿಸ್ತರಿಸಿ ನೀರಾವರಿ ಜಮೀನುಗಳಾಗಿ ಪರಿವರ್ತಿಸಿ ಜನ ನೆಮ್ಮದಿಯ ಬದುಕು ಕಟ್ಟಿಕೊಳ್ಳು ಸಹಕಾರಿಯಾಗಿದ್ದಾರೆ ಎಂದು ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯ, ಕಂದಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮನುಕುಲಕ್ಕೆ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಅರಿವು ಮೂಡಿಸಿ ತಮ್ಮ ಬೋಧನೆಗಳು ಹಾಗೂ ತತ್ವಾದರ್ಶಗಳಿಂದ ಇಡೀ ಮಾನವಕುಲಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಇವರು ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ದಲಿತರು, ಹಿಂದುಳಿದ ವರ್ಗಗಳ ಸಮುದಾಯವನ್ನು ಉನ್ನತಮಟ್ಟಕ್ಕೆ ಏರಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.
ತಹಸೀಲ್ದಾರ್ ಸುರೇಂದ್ರಮೂರ್ತಿ, ಬಿಸಿಎಂ ಇಲಾಖೆಯ ನಿವೃತ್ತಾ ಅಧಿಕಾರಿ ಡಿ.ರಾಮಯ್ಯ, ದಲಿತ ಮುಖಂಡ ಡಿ.ಕೆ.ಕೊಪ್ಪಲು ರಾಜಯ್ಯ, ವಕೀಲೆ ಪೂರ್ಣಿಮಾ, ಪುರಸಭಾ ಮಾಜಿ ಸದಸ್ಯ ವಿನಯ್ ಮಾತನಾಡಿದರು. ಅರಸು ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಬಿಸಿಎಂ ಅಧಿಕಾರಿ ಚಂದ್ರಕಲಾ, ಟಿಎಚ್‌ಒ ಡಾ.ಡಿ.ನಟರಾಜು, ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ್, ಸಿಡಿಪಿಒ ಅಣ್ಣಯ್ಯ, ವಲಯ ಅರಣ್ಯಾಧಿಕಾರಿ ಎಂ.ಆರ್.ರಶ್ಮಿ, ಅರಸು ಸಂಘದ ಅಧ್ಯಕ್ಷ ಮಾವನೂರು ಮಂಜು, ಆರ್ಯ ಈಡೀಗರ ಸಂಘದ ಅಧ್ಯಕ್ಷ ಶಿವಣ್ಣ, ಸರ್ವೋದಯ ರೈತ ಸಂಘದ ಅಧ್ಯಕ್ಷ ಗರುಡಗಂಭಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಮುಖಂಡರಾದ ಬಸವಯ್ಯ, ಆದಿ, ಬಿಸಿಎಂ ಇಲಾಖೆಯ ವಾರ್ಡನ್‌ಗಳಾದ ಜಿ.ಜೆ.ಮಹೇಶ್, ಎಸ್.ಎಸ್.ಮಧುಸೂದನ್, ಲೋಕೇಶ್, ಗೀತಾ ಇನ್ನಿತರರು ಇದ್ದರು.