ಉತ್ತಮ ರಾಜಕೀಯ ನಾಯಕರ ಅಗತ್ಯವಿದೆ

arasu
Published on

ಮಡಿಕೇರಿ:

ವೈದ್ಯರು, ಎಂಜಿನಿಯರ್‌ಗಳAತೆ ದೇಶಕ್ಕೆ ಉತ್ತಮ ರಾಜಕೀಯ ನಾಯಕರ ಅಗತ್ಯ ಇದೆ ಎಂದು ಕಾಂಗ್ರೆಸ್ ಮುಖಂಡ ಎಚ್.ಎ. ವೆಂಕಟೇಶ್ ಹೇಳಿದರು. ಕೊಡಗು ಜಿಲ್ಲಾ ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆ ವತಿಯಿಂದ ಬುಧವಾರ ಇಲ್ಲಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ್ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ವಿದ್ಯಾವಂತರು ರಾಜಕೀಯವನ್ನು ಇಷ್ಟಪಡುತ್ತಿಲ್ಲ. ರಾಜಕೀಯದ ಕುರಿತು ಅವರಲ್ಲಿ ನಿರಾಸಕ್ತಿ ಮೂಡಿದೆ. ದೇವರಾಜ ಅರಸು ಅವರನ್ನು ಮುಖ್ಯ ಮಂತ್ರಿಗಳಾಗಿದ್ದವರು ಎನ್ನುವ ಕಾರಣದಿಂದ ಜನತೆ ನೆನಪಿಸಿಕೊಳ್ಳುತ್ತಿಲ್ಲ. ಬದಲಾಗಿ ಅವವರು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು ಶ್ರಮಿಸಿದ ಮಹಾನ್ ನೇತಾರರಾಗಿದ್ದರು. ತಮ್ಮ ಆಡಳಿತದ ಅವಧಿಯಲ್ಲಿ ತಂದ ದೂರದೃಷ್ಟಿಯ ಜನಪರವಾದ ಯೋಜನೆಗಳು, ಆಡಳಿತ ವೈಖರಿಗಳು ರಾಜ್ಯದಲ್ಲಿ ಹೊಸ ರಾಜಕೀಯ ವಾತಾವರಣವನ್ನೇ ಸೃಷ್ಟಿಸಿತ್ತು. ಅಂದಿನ ದಿನಮಾನಗಳಲ್ಲಿ ಅರಸು ಆಡಳಿತ ರಾಷ್ಟçದ ಇತರ ರಾಜ್ಯಗಳಿಗೂ ಮಾದರಿಯದ್ದಾಗಿತ್ತು ಎಂದರು.

ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆ ಸ್ಥಾಪಕಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ 1991ರಲ್ಲಿ ಕೊಡಗಿನಲ್ಲಿ ಅಹಿಂದ ಒಕ್ಕೂಟದ ಸ್ಥಾಪನೆಯಾಯಿತು. ಆ ಮೂಲಕ ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತ ಸಮುದಾಯದ ಸಂಕಷ್ಟಗಳ ನಿವಾರಣೆಗೆ ಶ್ರಮಿಸುತ್ತಾ ಬಂದಿದೆ. ಅಹಿಂದ ಹೋರಾಟಗಳಿಂದ ತಳ ಸಮುದಾಯದ ಮಂದಿಯೂ ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಆಯ್ಕೆಯಾಗಿ ಅಧಿಕಾರವನ್ನು ಪಡೆಯಲು ಸಾಧ್ಯವಾಯಿತೆಂದರು.

ಸಾಹಿತಿ ಡಾ. ಬೆಸೂರು ಮೋಹನ್ ಪಾಳೇಗಾರ್ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತಗಾಯನ ಸ್ಪರ್ಧೆ ನಡೆಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವೈದ್ಯ ಸಾಹಿತಿ ಡಾ.ಕೆ.ಬಿ.ಸೂರ್ಯಕುಮರ್, ಕಾರ್ಮಿಕ ನಾಯಕರಾದ ಡಿ.ಎಸ್.ನಿರ್ವಾಣಪ್ಪ, ಪ್ರಗತಿಪರ ಚಿಂತಕ ವಿ.ಪಿ.ಶಶಿಧರ್, ಮಡಿಕೇರಿ ನಗರಸಭೆ ಪೌರಸೇವಾ ಹಿರಿಯ ಸಿಬ್ಬಂದಿ ರಾಮು, ಮಾಜಿ ದಫೇದಾರ್ ಜಿ.ಎ.ಚಾಮಿ, ಸಮಾಜ ಸೇವಕ ಎರ್ಮು ಹಾಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಬುಡಕಟ್ಟು ಸಮುದಾಯದ ನಾಯಕ ಶಿವು ಅವರನ್ನು ಸನ್ಮಾನಿಸಲಾಯಿತು.

ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ. ಮುದ್ದಯ್ಯ, ಕೊಡವ ಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಸುಭಾಷ್ ನಾಣಯ್ಯ, ರಾಜ್ಯ ಅಹಿಂದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಶಾಂತಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಘಟಕದ ಅಧ್ಯಕ್ಷ ಎಚ್.ಎಲ್. ದಿವಾಕರ್, ವಕೀಲರಾದ ಬಿ.ಇ. ಜಯೇಂದ್ರ, ಕೊಡಗು ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಕೆ.ಎ. ಯಾಕೂಬ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net