ಅರಸೀಕೆರೆ ಚಿಕ್ಕಕೆರೆಯಲ್ಲಿ ಮೀನುಗಳ ಮಾರಣ ಹೋಮ

ARASIKERE MEENU 13 (1)
Published on

ಅರಸೀಕೆರೆ: ಗ್ರಾಮದ ಚಿಕ್ಕ ಕೆರೆಯಲ್ಲಿ ಕಿಡಿಗೇಡಿಗಳು ಕ್ರಿಮಿನಾಶಕ ಬೆರೆಸಿದ ಹಿನ್ನೆಲೆಯಲ್ಲಿ ಮೀನುಗಳು ಸತ್ತಿದ್ದು, ದುರ್ವಾಸನೆ ಬೀರುತ್ತಿದೆ.

ಕೆರೆಯ ಪಕ್ಕದಲ್ಲಿ ಶುಕ್ರವಾರ ನಡೆದ ಸಂತೆಯಲ್ಲಿ ವ್ಯಾಪಾರಸ್ಥರು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ವಹಿವಾಟು ನಡೆಸಬೇಕಾಯಿತು.

ದೇಶಾದ್ಯಂತ ಹರಡಿರುವ ಕರೊನಾ ವೈರಸ್ ಸುದ್ದಿಯಿಂದ ಭೀತಿಯಲ್ಲಿರುವ ಗ್ರಾಮಸ್ಥರಿಗೀಗ ಮೀನುಗಳ ಸಾವಿನಿಂದ ಆತಂಕ ಹೆಚ್ಚಾಗಿದೆ.

ಶುಕ್ರವಾರ ಸ್ಥಳಕ್ಕೆ ಆಗಮಿಸಿದ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅನಂತರಾಜು, ಕೆರೆ ವೀಕ್ಷಣೆ ಮಾಡಿ ಅಲ್ಲಿನ ಕಲುಷಿತ ಪರಿಸರ ಗಮನಿಸಿದರು. ಕೆರೆ ಶುಚಿತ್ವ ಕಾಪಾಡುವಲ್ಲಿ ವಿಫಲವಾಗಿರುವ ಗ್ರಾಪಂ ಪಿಡಿಒಗೆ ತಕ್ಷಣ ನೋಟಿಸ್ ಜಾರಿ ಮಾಡುತ್ತೇನೆ. ಸತ್ತ ಕೆಲ ಮೀನುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ತಕ್ಷಣವೇ ಮೃತ ಮೀನುಗಳನ್ನು ಕೆರೆ ನೀರಿಂದ ತೆರವುಗೊಳಿಸಿ ಆಳದ ಗುಂಡಿಯಲ್ಲಿ ಮುಚ್ಚಿಹಾಬೇಕು. ದುರ್ಘಟನೆಗೆ ಕಾರಣವಾದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿ ಎಂದು ಸ್ಥಳದಲ್ಲೇ ಇದ್ದ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.

ಅಂದಾಜು 10 ಕ್ವಿಂಟಾಲ್‌ನಷ್ಟು ಕಾಟ್ಲಾ, ರೋಹು, ಮಟ್ಟು, ಮೀಸೆಗೊರಲ ತಳಿಯ ಮೀನುಗಳು ಸತ್ತು ದಡ ಸೇರಿದೆ. ಇನ್ನೂ ಹೆಚ್ಚಿನ ಮೀನುಗಳು ಸಾಯುತ್ತಿವೆ. ಯಾರೋ ಕಿಡಿಗೇಡಿಗಳು ಕೆರೆಯಲ್ಲಿ ವಿಷ ಬೆರೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಅಧಿಕಾರಿಗಳು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
> ಡಾ. ಸುರೇಶ್, ಅರಸೀಕೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net