‘ಮತ’ ಮನೆ ಮಗಳಿದ್ದಂತೆ

ARASIKERE BASAVANA KOTE 12 (2)
Published on

ಅರಸೀಕೆರೆ: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಲು ಅರ್ಹರೆಲ್ಲರೂ ಮತದಾನದಲ್ಲಿ ಭಾಗವಹಿಸಬೇಕು ಎಂದು ಹರಪನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಎಂ. ಸುರೇಶ್ ಹೇಳಿದರು.

ಬಸವನಕೋಟೆಯಲ್ಲಿ ಬುಧವಾರ ದಾವಣಗೆರೆ ವಿಶ್ವವಿದ್ಯಾಲಯ ಮತ್ತು ಹರಪನಹಳ್ಳಿಯ ಎಚ್‌ಪಿಎಸ್ ಪದವಿ ಕಾಲೇಜು ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತು ಉಪನ್ಯಾಸ ನೀಡಿದರು.

‘ಮತ’ ಮನೆಯ ಹೆಣ್ಣು ಮಕ್ಕಳಿದ್ದಂತೆ. ಅವರನ್ನು ಎಷ್ಟು ಜೋಪಾನ ಮಾಡಿರುತ್ತೇವೆಯೋ ಅಷ್ಟೇ ಚೆಂದವಾಗಿ ನೋಡಿಕೊಳ್ಳುವ ವ್ಯಕ್ತಿಗೆ ಮದುವೆ ಮಾಡಿಕೊಟ್ಟರೆ ಆಕೆಯ ಬದುಕು ಬಂಗಾರವಾಗುತ್ತದೆ. ಇದೇ ರೀತಿ ಯೋಗ್ಯತೆ, ಅಗತ್ಯ ವಿದ್ಯಾರ್ಹತೆ, ಅಭಿವೃದ್ಧಿ ಪರ ದುಡಿವ ವ್ಯಕ್ತಿಗೆ ಮತ ದಾನ ಮಾಡಿದರೆ ದೇಶ ಪ್ರಗತಿ ಹೊಂದುತ್ತದೆ. ಅಯೋಗ್ಯರಿಗೆ ಮತ ನೀಡಿದರೆ ಅಭಿವೃದ್ಧಿ ಬರೀ ಮಾತಲ್ಲೇ ಆಗುತ್ತದೆ ಎಂದರು.

ಪ್ರಸ್ತುತ ವಿದ್ಯಾವಂತ ಯುವಕರು, ಬುದ್ಧಿ ಜೀವಿಗಳು, ರಾಜಕೀಯ ಅನುಭವಿಗಳು ರಾಜಕಾರಣದಿಂದ ದೂರವೇ ಉಳಿಯುತ್ತಿದ್ದಾರೆ. ಕಾರಣ ಈ ಕ್ಷೇತ್ರವನ್ನು ಸಂಪೂರ್ಣ ಹಣ ಹೆಂಡ ಆವರಿಸಿಕೊಂಡಿದೆ. ಇದು ಹಣ ಹೂಡಿ ಹಣ ಪಡೆವ ರಿಯಲ್ ಎಸ್ಟೇಟ್ ಉದ್ಯಮದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ ಬದಲಿಸುವ ಶಕ್ತಿ ಯುವ ಸಮುದಾಯಕ್ಕಿದೆ. ಅವರು ಅಡ್ಡ ದಾರಿ ಹಿಡಿದರೆ ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿ ಅಯೋಮಯವಾಗುತ್ತದೆ. ಪ್ರಜ್ಞಾವಂತ ಯುವಕರು ಮತ ನೀಡುವ ಮೊದಲು ಯೋಚಿಸಬೇಕು. ತಾವು ದಾನ ಮಾಡುವ ಮತ ಯೋಗ್ಯ, ಕೆಲಸ ಮಾಡುವ ವ್ಯಕ್ತಿಗೆ ಎಂಬುದನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಯುವಕರು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿನಿಯರು ತಾವು ತೊಡುವ ಉಡುಪುಗಳ ಬಗ್ಗೆ ನಿಗಾ ವಹಿಸಬೇಕು. ಧರಿಸುವ ಬಟ್ಟೆ ಗೌರವ ನೀಡುವಂತಿರಬೇಕು. ಇದು ಉಲ್ಟಾ ಆದರೆ ಅಪರಾಧಗಳು ಹೆಚ್ಚಾಗುತ್ತವೆ ಎಂದರು.

ಗ್ರಾಮದ ಮುಖಂಡರಾದ ಪಿ. ನಾಗೇಂದ್ರಪ್ಪ, ಬಿ. ಪರಮೇಶ್ವರಪ್ಪ, ಗೋಣೆಪ್ಪ, ಷಡಕ್ಷರಿ, ಶಿಕ್ಷಕರಾದ ಸಂಗಮೇಶ್ವರ, ಗ್ರಾಪಂ ಸದಸ್ಯೆ ಅನಿತಾ ಗಜೇಂದ್ರ, ಪ್ರಾಚಾರ್ಯರಾದ ಎಚ್. ಸಿದ್ದೇಶ್ವರ, ಉಪನ್ಯಾಸಕರಾದ, ಕೊಂಚಕೇಲಿ, ಎಚ್. ಪ್ರವೀಣಕುಮಾರ್, ಎ.ಎಚ್. ಉಮೇಶ್ ಹಾಗೂ ಎನ್ನೆಸ್ಸೆಸ್ ಶಿಬಿರಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net