ಅರಸೀಕಟ್ಟೆ ಅಮ್ಮ ದಿವ್ಯ ರಥೋತ್ಸವ

16ark3
ಅರಸೀಕಟ್ಟೆ ಅಮ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಅರಕಲಗೂಡು: ತಾಲೂಕಿನ ಪ್ರಸಿದ್ಧ ಶಕ್ತಿದೇವತೆ ಶ್ರೀ ಅರಸೀಕಟ್ಟೆ ಅಮ್ಮ ದಿವ್ಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವೈಭವದಿಂದ ನಡೆಯಿತು.

ಅರಸೀಕಟ್ಟೆ ಅಮ್ಮನವರ ಜಾತ್ರೆ ಪ್ರಯುಕ್ತ ಸುಕ್ಷೇತ್ರದಲ್ಲಿ ಭಕ್ತಿ ಸಂಭ್ರಮ ಮೇಳೈಸಿತ್ತು. ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ರಥ ಬಲಿ, ರಥ ಪೂಜೆ, ಆರಾಧನೆ ಶಾಸ್ತ್ರೋಕ್ತವಾಗಿ ನೆರವೇರಿತು. ಬಳಿಕ ಅಲಂಕೃತ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ವಿಧಾನ ಪೂರೈಸಿದ ಬಳಿಕ ಭಕ್ತರು ದೇವಿ ನಾಮಸ್ಮರಣೆ ಮಾಡಿ ತೇರು ಎಳೆದರು.

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ರಥವು ಮೂಲ ದೇವಾಲಯದಿಂದ ಕಾವೇರಿ ಸಭಾಂಗಣದವರೆಗೂ ಸಾಗಿ ಅಲ್ಲಿಂದ ಮುದ್ದನಹಳ್ಳಿ ತಲುಪಿ ನಂತರ ಸ್ವಸ್ಥಾನ ಸೇರಿತು.

ರಥೋತ್ಸವದ ನಿಮಿತ್ತ ಮಹಾಗಣಪತಿ ಪೂಜೆ, ಪುಣ್ಯಾಹಾವಾಚನ, ನವಗ್ರಹ ಕಲಾಶಾ ರಾಧನೆ, ಮಹಾಗಣಪತಿ ಹೋಮ ಸೇರಿದಂತೆ ವಿವಿಧ ಹೋಮ-ಹವನ ನಡೆಯಿತು. ಭಕ್ತರು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಅರಸೀಕಟ್ಟೆಯ ಅಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎ.ಟಿ.ರಾಮಸ್ವಾಮಿ, ಕಾರ್ಯದರ್ಶಿ ಮಾದಾಪುರ ಕೃಷ್ಣೇಗೌಡ, ಖಜಾಂಚಿ ಸಿದ್ಧರಾಮು ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net