

ಮೈಸೂರು: ನವೋದಯ ರೆಪರ್ಟರಿ ಸಂಸ್ಥೆಯು ವಾಲ್ಮೆಕಿ ರಾಮಾಯಣ ಆಧಾರಿತ ಸರಣಿಯ ಎರಡನೇ ಭಾಗ ‘ಅರಣ್ಯ ಕಾಂಡ’ ನಾಟಕ ಪ್ರದರ್ಶನವನ್ನು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಫೆ.18 ಮತ್ತು 19 ರಂದು ಸಂಜೆ 7ಕ್ಕೆ ಆಯೋಜಿಸಿದೆ.\
ನವೋದಯ ರಂಗ ತಂಡವು ರಾಮಾಯಣವನ್ನು ಆಧರಿಸಿದ ತ್ರಿವಳಿ ನಾಟಕಗಳನ್ನು ರಂಗದ ಮೇಲೆ ತರುವ ನಿರ್ಧಾರ ಮಾಡಿದೆ. ಅಯೋಧ್ಯಾ ಕಾಂಡವೆಂಬ ಹೆಸರಿನ ಮೊದಲ ನಾಟಕವು ಈಗಾಗಲೇ ಪ್ರದರ್ಶನಗೊಂಡಿದೆ. ಅರಣ್ಯ ಕಾಂಡ ಎರಡನೆಯ ನಾಟಕ ಇದೀಗ ರಂಗದ ಮೇಲೆ ಬರುತ್ತಿದೆ.
ರಂಗಕರ್ಮಿ ಪ್ರಸನ್ನ ಅವರ ರಚನೆಯ ಈ ನಾಟಕವನ್ನು ಶ್ರೀಪಾದ್ ಭಟ್ ನಿರ್ದೇಶಿಸಿದ್ದಾರೆ. ಜತೆಗೆ, ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ. ಅನುಷ್(ಸಂಗೀತ), ಮುನ್ನ (ಸಂಗೀತ ಸಹಾಯ), ರಂಜನಾ ಕೇರ (ವಸ್ತ್ರವಿನ್ಯಾಸ), ಮಧುಸೂದನ್ ನೀನಾಸಮ್ (ಬೆಳಕು), ಮಂಜು ರಂಗವಲ್ಲಿ (ರಂಗ ನಿರ್ವಹಣೆ), ಸಂಜಯ್ (ರಂಗ ನಿರ್ವಹಣೆ ಸಹಾಯ) ರಂಗದ ಹಿಂದೆ ಸಹಕರಿಸಿದ್ದಾರೆ.
ಸುಪ್ರೀತ್ ಎಸ್.ಭಾರದ್ವಾಜ್, ಅಕ್ಷತಾ ಕುಮಟಾ, ಯದುಶ್ರೇಷ್ಠ, ಅನುಷ್, ಮುನ್ನ, ಶಾಮೋಮ್ ಸನ್ನುತ, ಭ್ರಮರಾ ಕೆ.ಉಡುಪ, ನೂರ್ ಅಹಮದ್ ಶೇಖ್ ಹಾಗೂ ಹರಿಸಿಂಗ್ ನಾಟಕದಲ್ಲಿ ಅಭಿನಯಿಸಿದ್ದಾರೆ.
ನವೋದಯ ಸಂಸ್ಥೆ ಕಳೆದೊಂದು ವರ್ಷದಿಂದ ವೃತ್ತಿಪರ ನಟರೊಂದಿಗೆ ಮೈಸೂರಿನಲ್ಲಿ ಕಾರ್ಯನಿರತವಾಗಿದೆ. ಎರಡು ನಾಟಕಗಳನ್ನು ಯಶಸ್ವಿಯಾಗಿ ಸಿದ್ಧಪಡಿಸಿ, ಈಗ ಅದನ್ನು ನಾಡಿನಾದ್ಯಂತ ಕೊಂಡೊಯ್ಯುವ ಕೆಲಸದಲ್ಲಿ ನಿರತವಾಗಿದೆ. ವಾಲ್ಮೆಕಿ ರಾಮಾಯಣ ಆಧಾರಿತ ಸರಣಿ ಸಂಗೀತ ನಾಟಕಗಳನ್ನು ಪ್ರಸ್ತುತಪಡಿಸುವತ್ತ ಸಿದ್ಧತೆ ನಡೆಸಿದೆ.
ಸೀತಾರಾಮರು ತಮ್ಮ ವನವಾಸದ ಮೊದಲ ಹದಿಮೂರು ವರ್ಷ ಪ್ರೇಮಿಗಳಂತೆ ಕಳೆದರು, ದಂಪತಿಗಳಂತಲ್ಲ. ಹಾಗಾಗಿ ಅರಣ್ಯಕಾಂಡವು ಒಂದು ಅಸಾಧಾರಣ ಪ್ರೇಮಕಥೆಯೂ ಹೌದು.
ಎಲ್ಲ ನಾಟಕಗಳಲ್ಲಿ ನಾಟಕೀಯ ವೈರುಧ್ಯ ಅಗತ್ಯ. ಇಲ್ಲಿ ಪ್ರೇಮಕ್ಕೆ ಪ್ರತಿಯಾಗಿ ಮೋಹವನ್ನು ನಿಲ್ಲಿಸಲಾಗಿದೆ, ಸೀತೆಗೆ ಪ್ರತಿಯಾಗಿ ಶೂರ್ಪನಖಿಯನ್ನು ನಿಲ್ಲಿಸಲಾಗಿದೆ. ಶೂರ್ಪನಖಿ ಸುಂದರಿ. ಸೀತೆ ಗೋಧಿಬಣ್ಣದ ಸುಂದರಿಯಾದರೆ ಶೂರ್ಪನಖಿ ರಾಗಿಬಣ್ಣದ ಸುಂದರಿ. ರಾಮನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಅವಳದು ಮೋಹ. ಸೀತೆಯು ಕೊಡುವುದು ಪ್ರೀತಿಯಾದರೆ, ಶೂರ್ಪನಖಿಯದು ಬೇಡುವ ಮೋಹ. ರಾಮ ಮರ್ಯಾದೆ ಕಾಪಿಟ್ಟುಕೊಂಡು ಬರುವ ಒಬ್ಬ ಸರಳ ಸಜ್ಜನ ಯುವಕ, ವಿಚಲಿತನಾಗದ ಧೀರ. ಅವನು ಆರ್ಯನೆನ್ನುವುದು ಅವನ ಹಿರಿಮೆಯಲ್ಲ, ಅಸುರಳೆಂಬುದು ಇವಳ ಕೀಳರಿಮೆಯಲ್ಲ… ನಾಟಕ ಹೀಗೆ ಮುಂದುವರಿಯಲಿದೆ.