ಕೈ, ದಳ ಮೈತ್ರಿಯಿಂದ ಹಿನ್ನೆಡೆ ಅನುಭವಿಸಿದ ಮಾಜಿ ಸಚಿವ ಮಂಜು

WhatsApp Image 2020-11-06 at 1.44.52 PM
Published on

ಹಾಸನ: ಅರಕಲಗೂಡು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ‌ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಹೂವಣ್ಣ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ನಿಖಿಲ್ ಗೌಡ‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೆಳಗ್ಗೆ ೮ರಿಂದ ಮಧ್ಯಾಹ್ನ ೧೨ ಗಂಟೆ ವರೆಗೆ‌ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ೩ನೇ ವಾರ್ಡ್ ಸದಸ್ಯ ಹೂವಣ್ಣ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ೧೭ನೇ ವಾರ್ಡ್ ನಿಖಿಲ್ ಗೌಡ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಇವರಿಬ್ಬರ ಅವಿರೋಧ ಆಯ್ಕೆ ಪ್ರಕಟಿಸಿದರು.

ಪಪಂ ೧೭ ಸ್ಥಾನಗಳಲ್ಲಿ ಕಾಂಗ್ರೆಸ್ ೫, ಜೆಡಿಎಸ್ ಮತ್ತು ಬಿಜೆಪಿ ತಲಾ‌ ೬ ಸ್ಥಾನ ಗಳಿಸಿದ್ದವು. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಗೊಂದಲದಿಂದಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ಸದಸ್ಯರು ಚುನಾಯಿತರಾದ ಒಂದೂವರೆ ವರ್ಷದ ನಂತೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು.
ನಿರೀಕ್ಷೆಯಂತೆ ಪಪಂ ಆಡಳಿತ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷಗಳ ಪಾಲಾಗಿದ್ದು ಅಧ್ಯಕ್ಷ ಸ್ಥಾನ ಗಿಟ್ಟಿಸುವಲ್ಲಿ ಶಾಸಕ ಎ.ಟಿ. ರಾಮಸ್ವಾಮಿ ಸಫಲರಾಗಿದ್ದಾರೆ. ಇನ್ನು ಬಿಸಿಎಂ ಬಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿ ಯಾರೊಬ್ಬರೂ ಸದಸ್ಯರು ಗೆದ್ದಿಲ್ಲದ ಕಾರಣ, ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ನಿರಾಯಾಸವಾಗಿ ಒಲಿದಿದೆ.

ದಶಕಗಳ ಕಾಲ ಕಳೆದ ಎರಡು ಬಾರಿಯೂ ಪಪಂ ಆಡಳಿತ ಕಾಂಗ್ರೆಸ್ ಹಿಡಿತದಲ್ಲಿತ್ತು, ಅಂದು ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ ಶಾಸಕರಾಗಿದ್ದರು. ಕಳೆದ ಲೋಕಸಭಾ ಚುನಾವಣೆ ವೇಳೆ ಎ. ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ನಂತರ ನಡೆದ ಪಪಂ ಸದಸ್ಯರ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ‌ ತಂದುಕೊಡುವಲ್ಲಿ ವಿಫಲರಾಗಿದ್ದರು. ಇದೀಗ ಕಾಂಗ್ರೆಸ್ , ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ. ಪಪಂ ಆಡಳಿತ ಉಳಿಸಿಕೊಳ್ಳಲು ಸಾಧ್ಯವಾಗದಾಗಿದ್ದು ಎ. ಮಂಜು ಅವರಿಗೆ ಹಿನ್ನಡೆ ಉಂಟಾಗಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ೯ನೇ ವಾರ್ಡ್ ನ ಜೆಡಿಎಸ್ ಸದಸ್ಯ ಕೃಷ್ಣಯ್ಯ ಸಭೆಗೆ ಗೈರಾಗುವ ಮೂಲಕ ಅಸಮಧಾನ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net