ಮಲ್ಲಿಪಟ್ಟಣದಲ್ಲಿ ಹೊನಲು ಬೆಳಕಿನ ಕಬ್ಬಡಿ ಹಬ್ಬ

WhatsApp Image 2021-03-28 at 5.48.46 PM
Published on

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣದಲ್ಲಿ ಶನಿವಾರ ರಾತ್ರಿ ಅದ್ದೂರಿ ಶುಭಾರಂಭ ಕಂಡ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಮಾಜಿ ಸಚಿವ ಎ. ಮಂಜು ಭಾಗವಹಿಸಿ ಕ್ರೀಡಾಭಿಮಾನಿಗಳನ್ನು ಹುರುದುಂಬಿಸಿದರು.

ವೈಭವೋಪೇತ ವೇದಿಕೆಯಲ್ಲಿ ಕ್ರೀಡಾಜ್ಯೋತಿ ಬೆಳಗಿಸಿ ಪ್ರೇಕ್ಷಕರಲ್ಲಿ ಹೊಸ ಚೈತನ್ಯ ತುಂಬಿ ಮಾತನಾಡಿದ ಎ. ಮಂಜು ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗಬಾರದು, ಕಬ್ಬಡಿ ಕ್ರೀಡೆಗೆ ಹೆಸರಾದ ಮಲ್ಲಿಪಟ್ಟಣದಲ್ಲಿ ಇಂದು ಹೊನಲು ಬೆಳಕಿನ ಅದ್ಭುತವಾದ ಕಬ್ಬಡಿ ಪಂದ್ಯಾವಳಿ ನಡೆಸಿ ಜಿಲ್ಲೆಗೆ ಗೌರವ ತಂದಿದ್ದಾರೆ. ಆಟಗಾರರು ರಾಜ್ಯ ಮಟ್ಟದಲ್ಲೂ ಪಾಲ್ಗೊಳ್ಳಲು ಇದು ವೇದಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದ ಕಬ್ಬಡಿ ಪಂದ್ಯಾವಳಿ ಆಯೋಜಿಸಲು ಸದಾ ಸಹಕಾರ ನೀಡುವುದಾಗಿ ಹೇಳಿದರು. ನೆರೆದಿದ್ದ ಕ್ರೀಡಾಭಿಮಾನಿಗಳು ಚಪ್ಪಾಳೆಯ ಸುರಿಮಳೆ ಸುರಿಸಿ ಹರ್ಷೋದ್ಗಾರ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮಾತನಾಡಿ, ಹಳ್ಳಿ ಸೊಗಡಿನ ಕಬ್ಬಡಿ ಕ್ರೀಡೆಗೆ ಹೆಸರಾದ ಮಲ್ಲಿಪಟ್ಟಣದಲ್ಲಿ ಇಂದು ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ ಎಂದು ಕೊಂಡಾಡಿದರು.

ಈ ಭಾಗದ ಕ್ರೀಡಾಭಿಮಾನಿಗಳಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಪಂದ್ಯಾವಳಿಯ ಪ್ರಥಮ ಮ್ಯಾಚ್ ನಲ್ಲಿ ರಣವೀಳ್ಯೆ ಪಡೆದ ಆರ್.ಎನ್.ಎಸ್. ಪೇಂಟ್ಸ್ ಮತ್ತು ಸಚಿನ್‌ ಅಟ್ಯಾಕರ್ಸ್ ತಂಡದ ಆಟಗರಾರು ರೋಚಕ ದಾಳಿ ನಡೆಸಿ ಚಪ್ಪಾಳೆ ಗಿಟ್ಟಿಸಿದರು. ಪ್ರತಿ ಮ್ಯಾಚ್ ನಲ್ಲಿ ಎಲ್ಲ ತಂಡಗಳ ಆಟಗಾರರು ಅತ್ಯದ್ಭುತ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು.

ಪಂದ್ಯಾವಳಿಯಲ್ಲಿ 8 ತಂಡಗಳಿಂದ 96 ಆಟಗಾರರು 33 ಮ್ಯಾಚ್ ಗಳಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ನಿರ್ಣಾಯಕ ಸೆಣಸಾಟ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net