

ಅರಕಲಗೂಡು : ಕಾಡಾನೆಗಳ ಹಾವಳಿ ನಡುವೆ ಬದುಕು ನಡೆಸುತ್ತಿರುವ ಕೊಡಗಿನ ಗಡಿ ಭಾಗದ ಹಳ್ಳಿಗಳಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸದಿರುವುದು ವಿಪರ್ಯಾಸದ ಸಂಗತಿ ಎಂದು ಉದ್ಯಮಿ ಎಂ.ಟಿ. ಕೃಷ್ಣೇಗೌಡ ಅಸಮಧಾನ ವ್ಯಕ್ತಪಡಿಸಿದರು.
ತಾಲೂಕಿನ ಮದಲಾಪುರ ಗ್ರಾಮದಲ್ಲಿ ಪಡುವಲುಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ 10 ದಿನಗಳ ಕಾಲ ಹಮ್ಮಿಕೊಂಡಿದ್ದ ಸಮಾಜ ಕಾರ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜಾನುವಾರುಗಳನ್ನು ಹೆಚ್ಚು ಸಾಕುವ ಗ್ರಾಮದಲ್ಲಿ ಕನಿಷ್ಠ ಪಶು ಆಸ್ಪತ್ರೆ ಕೂಡ ಇಲ್ಲವಾಗಿದೆ. ಕಾಡಾನೆಗಳ ಉಪಟಳದಿಂದ ಬೆಳೆ ನಷ್ಟ ಅನುಭವಿಸುತ್ತಿರುವ ಕೊಡಗಿನ ಭಾಗದ ಗ್ರಾಮಗಳ ಜನರ ಸಮಸ್ಯೆಗಳನ್ನು ಈಡೇರಿಸಲು ಆಳುವವರು ಇಚ್ಛಾಶಕ್ತಿ ತೋರಬೇಕಿದ ಎಂದರು.
ಪ್ರಾಧ್ಯಾಪಕ ಪ್ರೊ. ಮಲ್ಲೇಶ್‌ಗೌಡ ಮಾತನಾಡಿ, 50 ವರ್ಷಗಳ ಹಿಂದೆ ಇದ್ದ ಸಂಸ್ಕೃತಿ ಇಂದು ಹಳ್ಳಿಗಳಲ್ಲಿಯೂ ಕಣ್ಮರೆಯಾಗುತ್ತಿದೆ. ಇಂದಿನ ಯುವ ಪೀಳಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯೋಚಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ನಾರಾಯಣ್ ಮಾತನಾಡಿ, ಕಷ್ಟಪಡದೆ ಬದುಕಿನಲ್ಲಿ ಉನ್ನತ ಸಾಧನೆ ಮಾಡಲು ಎಂದಿಗೂ ಸಾಧ್ಯವಾಗುವುದಿಲ್ಲ. ಇದನ್ನರಿತು ವಿದ್ಯಾರ್ಥಿಗಳು ಓದಿನ ಹಂತದಲ್ಲಿ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು, ಶಿಬಿರದಲ್ಲಿ ಕಲಿತ ಅನುಭವಗಳನ್ನು ಜೀವನದ ಉದ್ದಕ್ಕೂ ಅಳವಡಿಸಿಕೊಂಡು ಯಶಸ್ಸಿನ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಡಿ.ಜಿ. ಕೃಷ್ಣೇಗೌಡ, ನಿವೃತ್ತ ನೌಕರ ಬಿ.ಟಿ. ಜವರೇಗೌಡ, ಉದ್ಯಮಿ ಎಂ.ಆರ್. ರಂಗಸ್ವಾಮಿ, ಮುಖಂಡರಾದ ರಾಜೇಗೌಡ, ಕಳ್ಳಿಮುದ್ದನಹಳ್ಳಿ ಲೋಕೇಶ್, ಮಂಜುನಾಥ್, ಸಂದೀಪ್‌ಗೌಡ ಮತ್ತಿತರರು ಹಾಜರಿದ್ದರು.
ಹೊನ್ನವಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನಮ್ಮ ಲೋಕೇಶ್ ಕೊಡುಗೆಯಾಗಿ ನೀಡಿದ ಫೈಲ್‌ಗಳನ್ನು ಶಿಬಿರಾರ್ಥಿಗಳಿಗೆ ವಿತರಿಸಲಾಯಿತು.