

ಅರಕೇರಾ: ದೇಶದ ಘನತೆ, ಗೌರವ ಎತ್ತಿ ಹಿಡಿಯುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಅನಂತರಾಜ ನಾಯಕ ಹೇಳಿದರು.
ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸ್ಥಳೀಯ ಗ್ರಾಪಂ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಸಂವಿಧಾನವು ಪ್ರಜಾಪ್ರಭತ್ವ ಮತ್ತು ಜಾತ್ಯತೀತತೆ ಪ್ರತಿಬಿಂಬಿಸುವುದಾಗಿದೆ. ಇತ್ತೀಚೆಗೆ ಸಂವಿಧಾನದಲ್ಲಿ ವಿಧೇಯಕಗಳ ತಿದ್ದುಪಡಿ ಮಾಡುವ ಕೆಲಸಗಳು ನಡೆಯುತ್ತಿವೆ. ಆದರೆ, ಡಾ.ಅಂಬೇಡ್ಕರ ನೀಡಿರುವ ಸಂವಿಧಾನ ಬಲಿಷ್ಠವಾದ್ದು, ಅನಗತ್ಯವಾಗಿ ಯಾರೂ ಕೈ ಹಾಕಬಾರದು ಎಂದರು.
ಪಿಡಿಒ ವೆಂಕೋಬ ನಾಯಕ ಮಾತನಾಡಿ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ಹಕ್ಕು ಪ್ರತಿಪಾದಿಸಲಾಗಿದೆ. ಶಾಂತಿ, ಸಹನೆ, ತಾಳ್ಮೆ, ಭ್ರಾತೃತ್ವದಿಂದ ಎಲ್ಲರೂ ಬಾಳುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಇತ್ತೀಚೆಗೆ ಪಿಎಸ್‌ಐ ಆಗಿ ನೇಮಕಗೊಂಡ ಅಜ್ಮಿರ್ ಗನಿಸಾಬ್ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ರಂಗಮ್ಮ ನಾಯಕ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳಿಂದ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉಪಾಧ್ಯಕ್ಷೆ ಮಲ್ಲಮ್ಮ, ಜಿಪಂ ಮಾಜಿ ಸದಸ್ಯ ಡಾ.ಎಚ್.ಎ ನಾಡಗೌಡ, ಪ್ರಮುಖರಾದ ಮಲ್ಲಪ್ಪ ಸಾಹುಕಾರ, ಬೂದೆಪ್ಪ ಸಾಹುಕಾರ, ಜಾವೀದ್ ಚಿಂಚೋಳಿಕರ್, ಬಾಷಾ ಸಾಬ್, ಕರೀಂ ಸಾಬ್ ಇತರರಿದ್ದರು.
ತಹಸಿಲ್ ಕಚೇರಿ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ತಹಸೀಲ್ದಾರ್ ಅಮರೇಶ ಬಿರಾದಾರ ಭಾನುವಾರ ಧ್ವಜಾರೋಹಣ ನೆರವೇರಿಸಿದರು. ಉಪ ತಹಸೀಲ್ದಾರ್ ಮನೋಹರ ನಾಯಕ, ಕಂದಾಯ ನಿರೀಕ್ಷಕ ಬಸವರಾಜ ಹೂನೂರು, ವಿಷಯ ನಿರ್ವಾಹಕ ಕನಕರೆಡ್ಡಿ, ಗ್ರಾಮ ಆಡಳಿತಾಧಿಕಾರಿಗಳಾದ ಮಮತಾ, ಅರುಣ, ವೆಂಕಟೇಶ, ಕೆಂಚಬಸ್ಸಪ್ಪ, ಕಂಪ್ಯೂಟರ್ ಆಪರೇಟರ್ ವೆಂಕಟೇಶ, ಕರಿಯಪ್ಪ ಇತರರಿದ್ದರು.