

ಅರಕೇರಾ: ತಾಲೂಕಿನ ನೀಲಗಲ್ ಬೃಹನ್ಮಠದ ಶ್ರೀ ಶಾಂಭವಿ ಶಾಂತಮಲ್ಲೇಶ್ವರ ಜಾತ್ರೋತ್ಸವ ಅಂಗವಾಗಿ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಮಹಿಳೆಯರು ಭಾನುವಾರ ಸಂಜೆ ಉಚ್ಛಾಯ ಎಳೆದರು.
ಬೆಳಗ್ಗೆಯಿಂದ ದೇವಿಗೆ ವಿಶೇಷ ಪೂಜೆ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಮಹಿಳೆಯರು ಉಚ್ಛಾಯ ಎಳೆಯುವ ಮೂಲಕ ಭಕ್ತಿ ಸಮರ್ಪಿಸಿ ಜಾತ್ರೆಗೆ ವಿಶೇಷ ಮೆರುಗು ನೀಡಿದರು.
ಶ್ರೀಮಠದ ಡಾ.ಪಂಚಾಕ್ಷರಿ ಶಿವಾಚಾರ್ಯರು ಹಾಗೂ ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು, ಮಂಗಳವಾರ ಪೇಟೆಯ ವೀರ ಸಂಗಮೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ಅಪಾರ ಭಕ್ತರು ಪಾಲ್ಗೊಂಡಿದ್ದರು.