ಮಠಗಳಿಂದ ಭಕ್ತರಿಗೆ ನ್ಯಾಯದಾನ

Arakera kashi shri visit
ನೀಲಗಲ್‌ನಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ, ಮಾನ್ವಿ ಕಲ್ಮಠದ ವಿರೂಪಾಕ್ಷಾರಾಧ್ಯ ಶಿವಾಚಾರ್ಯ, ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರು, ನೀಲಗಲ್ ಬೃಹನ್ಮಠದ ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯರು ಇದ್ದರು.
Published on

ಅರಕೇರಾ : ಮಠಾಧೀಶರಿಗೆ ಸಮಾಜವೇ ಕುಟುಂಬ. ಸಾಮಾಜಿಕ ಸೇವೆ ಸಲ್ಲಿಸಬೇಕೆಂಬ ಸದುದ್ದೇಶದಿಂದ ಎಲ್ಲವನ್ನೂ ತ್ಯಜಿಸಿರುತ್ತಾರೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

ತಾಲೂಕಿನ ನೀಲಗಲ್ ಶ್ರೀ ಶಾಂಭವಿ ಶಾಂತಮಲ್ಲೇಶ್ವರ ಬೃಹನ್ಮಠದಲ್ಲಿ ಪೀಠಾಧಿಪತಿ ಡಾ.ಪಂಚಾಕ್ಷರಿ ಶಿವಾಚಾರ್ಯರ ಜನ್ಮದಿನದ ವಜ್ರ ಮಹೋತ್ಸವ ಹಾಗೂ ಜಾತ್ರೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಸೋಮವಾರ ಮಾತನಾಡಿದರು.

ಮಠಮಾನ್ಯಗಳು ಶ್ರದ್ಧೆ, ಭಕ್ತಿ, ಸಂಸ್ಕಾರ ಕೊಡುವುದರೊಂದಿಗೆ ನೊಂದು ಬರುವ ಭಕ್ತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿವೆ. ಪಶು, ಪಕ್ಷಿಗಳಿಗಿಂತ ಮನುಷ್ಯ ಭಿನ್ನವಾಗಿದ್ದಾನೆ. ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡದಿದ್ದರೆ ಭವಿಷ್ಯದಲ್ಲಿ ಮಾತಾ, ಪಿತೃಗಳೇ ವೈರಿಗಳಾಗುತ್ತಾರೆ. ಪ್ರಸ್ತುತ ಅವಿಭಕ್ತ ಕುಟುಂಬಗಳು ಕಾಣುವುದು ಕಷ್ಟ. ಸ್ವಾರ್ಥದ ಬದುಕು ಕ್ಷಣ ಮಾತ್ರಕ್ಕೆ ಸುಂದರ ಎಂದರು.

ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಅಧ್ಯಾತ್ಮ, ಸನ್ಯಾಸ, ಧರ್ಮ ಎನ್ನುವುದು ಇಡೀ ಮನುಕುಲದ ಜೀವಾಳ. ಮನೆಯಲ್ಲಿ ತಂದೆ-ತಾಯಿ, ಶಾಲೆಯಲ್ಲಿ ಶಿಕ್ಷಕರು ಸರಿಯಾದ ಶಿಕ್ಷಣ ನೀಡಿದಾಗ ಮಾತ್ರ ಪೊಲೀಸರ ಕೆಲಸ ಕಡಿಮೆಯಾಗುತ್ತದೆ. ಇಡೀ ಜಗತ್ತಿನಲ್ಲಿ ಸರಿ ತಪ್ಪುಗಳನ್ನು ಹೇಳಲಿಕ್ಕೆ ಸಾಧು ಸಂತರಿದ್ದಾರೆ. ಅಕ್ಷರ, ಜ್ಞಾನ, ಮೂಢನಂಬಿಕೆ ಹಾಗೂ ಸರಿ, ತಪ್ಪು ಯಾವುದು ಎನ್ನುವುದರ ಬಗ್ಗೆ ಸಾಧು, ಸಂತರು ಮೊದಲಿನಿಂದ ತಿಳಿಸುತ್ತ ಬಂದಿದ್ದಾರೆ. ಎಲ್ಲವನ್ನೂ ಅಳವಡಿಸಿಕೊಳ್ಳುವ ಜವಾಬ್ದಾರಿ ಮಾತ್ರ ಮರೆತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕಿ ಕರೆಮ್ಮ ಜಿ. ನಾಯಕ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಾನ್ವಿ ಕಲ್ಮಠದ ವಿರೂಪಾಕ್ಷಾರಾಧ್ಯ ಶಿವಾಚಾರ್ಯರು, ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರು, ನೀಲಗಲ್ ಬೃಹನ್ಮಠದ ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net